ಇಂಡಿಯನ್ ಮುಜಾಹಿದ್ದೀನ್, ಈಸ್ಟ್ ಇಂಡಿಯಾ ಸೇರಿದಂತೆ ಇನ್ನೂ ಕೆಲ ದೇಶ ವಿರೋಧಿ ಸಂಘಟನೆಗಳು ಕೂಡ ಇಂಡಿಯಾ ಹೆಸರಿಟ್ಟುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಪಕ್ಷಗಳ ಒಕ್ಕೂಟವನ್ನು ತರಾಟೆಗೆ ತೆಗೆದುಕೊಂಡಿರುವ ಮೋದಿ, ಜನರನ್ನು ದಾರಿ ತಪ್ಪಿಸಲು ಯತ್ನಿಸುವ ಪ್ರಯತ್ನ ಎಂದಿದ್ದಾರೆ.
ನವದೆಹಲಿ(ಜು.25) ಲೋಕಸಭಾ ಚುನಾವಣೆಗೆ ತಯಾರಾಗುತ್ತಿರುವ ವಿಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಗೆ I-N-D-I-A ಹೆಸರಿಟ್ಟಿದೆ. ವಿಪಕ್ಷಗಳ ಒಕ್ಕೂಟ ಈಗಾಗಲೇ ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ದ ಹೋರಾಟ ನಡೆಸುತ್ತಿದೆ. ವಿಪಕ್ಷಗಳ ಒಕ್ಕೂಟವನ್ನು ಪ್ರಧಾನಿ ಮೋದಿ ಟೀಕಿಸಿದ್ದಾರೆ. ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ, ಭಾರತವನ್ನು ಲೂಟಿ ಹೊಡೆದ ಈಸ್ಟ್ ಇಂಡಿಯಾ ಕಂಪನಿ ಕೂಡ ಇಂಡಿಯಾ ಹೆಸರನ್ನೇ ಇಟ್ಟುಕೊಂಡಿತ್ತು ಎಂದು ಮೋದಿ ಹೇಳಿದ್ದಾರೆ. ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷಗಳು ಇಂಡಿಯಾ ಹೆಸರಿಟ್ಟು ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ವಿರೋಧ ಪಕ್ಷಗಳು ಇಂಡಿಯಾ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಪಕ್ಷಗಳ ಒಕ್ಕೂಟ ಯಾವುದೇ ನಿರ್ದೇಶನವಿಲ್ಲದೆ ಸಾಗುತ್ತಿದೆ. ಇಂಡಿಯಾ ಹೆಸರಿಟ್ಟುಕೊಂಡು ಜನರ ಮನಸ್ಸಿನಲ್ಲಿ ಹತ್ತಿರವಾಗುವ ಕೆಲಸಕ್ಕೆ ಮುಂದಾಗಿದೆ. ಜನರ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ವಿಪಕ್ಷಗಳ ಒಕ್ಕೂಟ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!
ವಿಪಕ್ಷಗಳ ಒಕ್ಕೂಟ ಅಧಿಕಾರ ಹಿಡಿಯಲು ಯಾವ ಮಟ್ಟಕ್ಕೂ ಬೇಕಾದರು ಇಳಿಯುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ಇಂಡಿಯಾ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೋದಿ ಹೇಳಿದ್ದಾರೆ. ಬಿಜೆಪಿ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಸೇರಿದಂತೆ ವಿಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜುಲೈ 18 ರಂದು ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಒಕ್ಕೂಟ ಸಭಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ ಸೇರಿದಂತೆ 26 ಪಕ್ಷಗಳು ಪಾಲ್ಗೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ವಿಪಕ್ಷಗಳು ನಿರ್ಧರಿಸಿದೆ. ಹೀಗಾಗಿ ಬಿಹಾರ ಪಾಟ್ನಾದಲ್ಲಿ ಸಭೆ ಸೇರಿದ ಬಳಿಕ, ಬೆಂಗಳೂರಿನಲ್ಲಿ ಎರಡನೇ ಸಭೆ ಸೇರಿತ್ತು. ಈ ವೇಳೆ ಒಕ್ಕೂಟಕ್ಕೆ ಇಂಡಿಯಾ ಹೆಸರಿಡಲಾಗಿದೆ. ಈ ಸಭೆಯಲ್ಲಿ ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ, ಟಿಎಂಸಿ ವರಿಷ್ಠರಾದ ಮಮತಾ ಬ್ಯಾನರ್ಜಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಘಟಾನುಘಟಿ ನಾಯಕರು ಪಾಲ್ಗೊಂಡಿದ್ದರು.
ವಿಪಕ್ಷ ಮೈತ್ರಿಗೆ I-N-D-I-A ಹೆಸರು ಬಳಕೆ, ಕರ್ನಾಟಕದ ಬೆನ್ನಲ್ಲೇ ದೆಹಲಿಯಲ್ಲಿ ದಾಖಲಾಯ್ತು ದೂರು!
ಎನ್‌ಡಿಎ ಮೈತ್ರಿಕೂಟದ ವಿರುದ್ಧ ವಿಪಕ್ಷಗಳು ರಚಿಸಿಕೊಂಡ ಮಹಾಮೈತ್ರಿಕೂಟಕ್ಕೆ ‘ಇಂಡಿಯಾ’ ಎಂಬ ಹೆಸರಿಟ್ಟಬಗ್ಗೆ ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಆಕ್ರೋಶಗೊಂಡಿದ್ದಾರೆ ಅನ್ನೋ ವರದಿಗಳು ಹಬ್ಬಿತ್ತು. ಆದರೆ ಸ್ಪಷ್ಟನೆ ನೀಡಿದ್ದ ನಿತೀಶ್ ಕುಮಾರ್, ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
