ಬಿಜೆಪಿ ಮಣಿಸಲು ಒಗ್ಗಟ್ಟಾಗಿರುವ ವಿಪಕ್ಷಗಳು ಮಹಾ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಗೆ I-N-D-I-A ಎಂದು ನಾಮಕರಣ ಮಾಡಿದೆ. ಆದರೆ ದೇಶದ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಇದೀಗ ದೇಶದ ಹಲವೆಡೆ ದೂರು ದಾಖಲಾಗಿದೆ. ಕರ್ನಾಟಕದ ಬೆನ್ನಲ್ಲೇ ಇದೀಗ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನವದೆಹಲಿ(ಜು.19) ವಿಪಕ್ಷಗಳ ಎರಡನೆ ಸಭೆ ಬೆನ್ನಲ್ಲೇ ರಾಜಕೀಯ ತಲ್ಲಣ ಸೃಷ್ಟಿಯಾಗಿದೆ. ಒಂದೆಡೆ ವಿಪಕ್ಷಕ್ಕೆ ಸೆಡ್ಡು ಹೊಡೆಯಲು ಎನ್‌ಡಿಎ ಮಿತ್ರ ಕೂಟಗಳ ಸಭೆ ನಡೆದಿದೆ. ಇಂದು ವಿಪಕ್ಷ ಸಭೆಯ ಸದಸ್ಯ ಉದ್ಧವ್ ಠಾಕ್ರೆ, ಎನ್‌ಡಿಎಂ ಸರ್ಕಾರದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬೇಟಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ವಿಪಕ್ಷಗಳ ಮೈತ್ರಿಗೆ I-N-D-I-A ಹೆಸರು ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ. ದೇಶದ ಹೆಸರನ್ನು ಬಳಸಲಾಗಿದೆ ಎಂದು ಕರ್ನಾಟಕದಲ್ಲಿ ದೂರು ದಾಖಲಾಗಿತ್ತು. ಇದರ ಬೆನ್ನಲ್ಲೇ ದೆಹಲಿಯಲ್ಲೂ ದೂರು ದಾಖಲಾಗಿದೆ.
ಇಂಡಿಯಾ ಅನ್ನೋ ಹೆಸರನ್ನು ಚುನಾವಣೆಗೆ ಬಳಸಿಕೊಳ್ಳಲಾಗಿದೆ. ಈ ಹೆಸರು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಹಾಗೂ ವ್ಯಕ್ತಿತ್ವ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಪಕ್ಷಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವಿನಾಶ್ ಮಿಶ್ರಾ ದೆಹಲಿಯ ಬಾರಕಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಸಭೆ ಬಳಿಕ ವಿಪಕ್ಷಗಳಿಗೆ ಸಂಕಷ್ಟ ಹೆಚ್ಚಾಗುತ್ತಿದೆ.
I-N-D-I-A ಹೆಸರಿಟ್ಟ ಬೆನ್ನಲ್ಲೇ ವಿಪಕ್ಷ ಮೈತ್ರಿಗೆ ವಿಕೆಟ್ ಪತನ ಭೀತಿ, ಅಜಿತ್ ಪವಾರ್ ಭೇಟಿಯಾದ ಉದ್ಧವ್!
ಅವಿನಾಶ್ ಮಿಶ್ರಾಗೂ ಮೊದಲು ಕರ್ನಾಟಕದಲ್ಲಿ ಗಿರೀಶ್ ಭಾರದ್ವಾಜ್ ಇದೇ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಲಾಂಛನ, ಹೆಸರು ಅಸಮರ್ಪಕ ಬಳಕೆ ತಡಗೆಟ್ಟುವಿಕೆ ಕಾಯ್ದೆ 1950 ಅಡಿಯಲ್ಲಿ ಈ ರೀತಿ ಹೆಸರು ಬಳಕೆಗೆ ಅವಕಾಶವಿಲ್ಲ. ಹೀಗಿದ್ದರೂ ರಾಜಕೀಯ ಪಕ್ಷಗಳು ಚುನಾವಣೆ ಎದುರಿಸಲು ಈ ಹೆಸರು ಬಳಕೆ ಮಾಡಿದ್ದು ಹೇಗೆ? ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಗಿರೀಶ್ ಭಾರದ್ವಾಜ್ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಹೊಸ ನಾಮಕರಣ ಮಾಡಲಾಗಿತ್ತು. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸ್ವೀ ಅಲಯನ್ಸ್( I-N-D-I-A) ಎಂಬ ನಾಮಕರಣ ಮಾಡಲಾಯಿತು. ಮೊದಲು ಡೆವಲಪ್‌ಮೆಂಟಲ್ ಬದಲು ಡೆಮಾಕ್ರಟಿಕ್ ಪದ ಬಳಸಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಡ ಇದೇ ಪದ ಇರುವುದರಿಂದ ಬದಲಿಸಲಾಯಿತು.
‘ಇದು ಬಿಜೆಪಿ ಹಾಗೂ ವಿರೋಧಪಕ್ಷಗಳ ನಡುವಿನ ಹೋರಾಟವಲ್ಲ. ದೇಶದ ಧ್ವನಿಯಾಗಿ ಹೋರಾಟ ಮಾಡುತ್ತಿರುವುದರಿಂದ ಈ ಹೆಸರು (ಇಂಡಿಯಾ) ಆಯ್ದುಕೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಇದು ಎನ್‌ಡಿಎ ಹಾಗೂ ಇಂಡಿಯಾ ನಡುವಿನ ಹೋರಾಟ. ಹಿಂದೂಸ್ತಾನದ ವಿರುದ್ಧ ಯಾರೇ ಹೋರಾಟ ಮಾಡಿದರೂ ಗೆಲುವು ಯಾರದ್ದಾಗಲಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಮುಂಬೈ ಸಭೆಯಲ್ಲಿ ಕಾರ್ಯಸೂಚಿ ಸಿದ್ಧಪಡಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ವಿಪಕ್ಷಗಳ ಮೈತ್ರಿಗೆ INDIA ಹೆಸರು, ನಿತೀಶ್ ಕುಮಾರ್ ಅಪಸ್ವರ; ಇತ್ತ ಚುನಾವಣಾ ಆಯೋಗಕ್ಕೆ ದಾಖಲಾಯ್ತು ದೂರು!
ಮೈತ್ರಿ 26 ಪಕ್ಷಗಳ ನಡುವೆ ನಡೆದಿದೆ. ಮೊದಲು ಯುಪಿಎ ಹೆಸರಿನಲ್ಲಿ ಇತ್ತು. ಈಗ ಹೊಸ ಹೆಸರಿನಿಂದ ಬಂದಿದ್ದೇವೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು ಎನ್‌ಡಿಎ ಈ ಹಿಂದೆ ಇತ್ತು, ಆದರೆ ಇಷ್ಟುದಿನ ಅಸ್ತಿತ್ವದಲ್ಲಿ ಇರಲಿಲ್ಲ. ದಲಿತರು, ಅಲ್ಪಸಂಖ್ಯಾತರು, ಹಿಂದೂ, ಮುಸಲ್ಮಾನ, ಸಿಖ್ ಸಮುದಾಯಗಳಲ್ಲಿ, ಅರುಣಾಚಲ ಪ್ರದೇಶ, ಮಣಿಪುರ, ಉತ್ತರ ಪ್ರದೇಶ, ದೆಹಲಿ, ಬಂಗಾಳ, ಬಿಹಾರ, ಮಹಾರಾಷ್ಟ್ರ ಎಲ್ಲ ಕಡೆ ಅಪಾಯವಿದೆ. ಇವುಗಳಿಂದ ಅಪಾಯದ ಸ್ಥಿತಿಯಲ್ಲಿರುವ ದೇಶ ಉಳಿಸಬೇಕಿದೆ ಎಂದರು.
