2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್ ‘ಲೋಕ’ಸಭೆ!
ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡ ಬಳಿಕ ವಿಪಕ್ಷ ನಾಯಕರನ್ನು ಭೇಟಿ ಮಾಡಿ ಬಲಿಷ್ಠ ಮೈತ್ರಿಕೂಟದ ರಚನೆ ಮಾಡಲು ನಿತೀಶ್ ಕುಮಾರ್ ಶ್ರಮಿಸುತ್ತಿದ್ದು, ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಪಟನಾ (ಮೇ 30, 2023): 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ರಣತಂತ್ರ ರೂಪಿಸುವುದಕ್ಕಾಗಿ ವಿಪಕ್ಷಗಳ ಬೃಹತ್ ಸಭೆ ಜೂನ್ 12ರಂದು ಬಿಹಾರ ರಾಜ್ಯ ರಾಜಧಾನಿ ಪಟನಾದಲ್ಲಿ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಸಭೆ ಆಯೋಜನೆಗೊಳ್ಳುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡ ಬಳಿಕ ವಿಪಕ್ಷ ನಾಯಕರನ್ನು ಭೇಟಿ ಮಾಡಿ ಬಲಿಷ್ಠ ಮೈತ್ರಿಕೂಟದ ರಚನೆ ಮಾಡಲು ನಿತೀಶ್ ಕುಮಾರ್ ಶ್ರಮಿಸುತ್ತಿದ್ದು, ಹಲವು ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎಲ್ಲಾ ವಿಪಕ್ಷಗಳು ಬಿಜೆಪಿ ವಿರುದ್ಧದ ನಿಲುವು ಹೊಂದಿದ್ದರೂ ಸಹ ಕೆಲವು ಪಕ್ಷಗಳು ಕಾಂಗ್ರೆಸ್ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ.
ಇದನ್ನು ಓದಿ: ನೂತನ ಸಂಸತ್ ಭವನ ಉದ್ಘಾಟನೆ ರಾಜನ ಪಟ್ಟಾಭಿಷೇಕದಂತಿತ್ತು: ವಿಪಕ್ಷಗಳ ಟೀಕೆ
ಹಾಗಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿರ್ದೇಶನದಂತೆ ಪಟನಾದಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟದಲ್ಲಿರುವ ಪಕ್ಷಗಳಷ್ಟೇ ಅಲ್ಲದೇ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರಿಗೂ ಆಹ್ವಾನ ನೀಡಲಾಗಿದೆ.
ಈ ಸಭೆಯಲ್ಲಿ ವಿಪಕ್ಷಗಳು ಒಗ್ಗಟನ್ನು ಪ್ರದರ್ಶಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ನಿರ್ಧರಿಸಲಾಗಿದೆ. ವಿಪಕ್ಷಗಳ ಬಲಿಷ್ಠ ಮೈತ್ರಿಕೂಟ ರಚಿಸುವ ಕುರಿತಾಗಿ ಈಗಾಗಲೇ ನಿತೀಶ್ ಕುಮಾರ್, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಕೆಸಿಆರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಉದ್ದವ್ ಠಾಕ್ರೆ ಸೇರಿದಂತೆ ಹಲವು ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ವಿವಾದ, ವಿಪಕ್ಷಗಳ ಬಹಿಷ್ಕಾರ ನಡುವೆ ಕೇಂದ್ರಕ್ಕೆ ಸಿಎಂ ಪಟ್ನಾಯಕ್ ಬೆಂಬಲ