ಚುನಾವಣೆ ಸಮೀಪಿಸ್ತಿದ್ದಂತೆ ವಿಪಕ್ಷಗಳಿಗೆ ಮತ್ತೆ ಇವಿಎಂ ಭಯ: ಶರದ್‌ ಪವಾರ್‌ ನಿವಾಸದಲ್ಲಿಂದು ಚರ್ಚೆ..!

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತದೃಷ್ಟಿಯಿಂದ ನಾವು ಒಟ್ಟಾಗಿ ಕುಳಿತು ಖ್ಯಾತ ಐಟಿ ವೃತ್ತಿಪರರು ಮತ್ತು ಕ್ರಿಪ್ಟೋಗ್ರಾಫರ್‌ಗಳು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಶರದ್‌ ಪವಾರ್ ವಿವಿಧ ಪ್ರತಿಪಕ್ಷಗಳ ನಾಯಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

opposition parties to meet at sharad pawars home discuss evm efficacy ash

ಹೊಸದಿಲ್ಲಿ (ಮಾರ್ಚ್‌ 23, 2023): 2024ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ವಿಪಕ್ಷಗಳ ಒಗ್ಗಟ್ಟಿನ ಮಾತುಕತೆಯ ನಡುವೆಯೇ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇವಿಎಂಗಳ ಸಾಮಾನ್ಯ ಹಿತಾಸಕ್ತಿ ಮತ್ತು ಪರಿಣಾಮಕಾರಿತ್ವದ ವಿಷಯಗಳ ಕುರಿತು ಚರ್ಚಿಸಲು ವಿವಿಧ ವಿರೋಧ ಪಕ್ಷಗಳ ನಾಯಕರನ್ನು ಇಂದು ಅಂದರೆ ಗುರುವಾರ ಆಹ್ವಾನಿಸಿದ್ದಾರೆ. ಸಂಜೆ 6 ಗಂಟೆಗೆ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತಾಸಕ್ತಿಯಲ್ಲಿ, ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂಗಳು) ನಿಖರವಾಗಿರಬೇಕು ಮತ್ತು ಅವುಗಳ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಸಂದೇಹಗಳಿದ್ದರೆ ಮುಖ್ಯ ಚುನಾವಣಾ ಆಯುಕ್ತರು ಪರಿಹರಿಸಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದಾರೆ.

ಒಳಗೆ ಚಿಪ್ ಇರುವ ಯಾವುದೇ ಯಂತ್ರವನ್ನು ಹ್ಯಾಕ್ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ, ಯಾವುದೇ ನಿರ್ಲಜ್ಜ ಅಂಶಗಳಿಂದ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡಲು ನಾವು ಅನುಮತಿ ನೀಡಲ್ಲ. ಆದ್ದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತದೃಷ್ಟಿಯಿಂದ ನಾವು ಒಟ್ಟಾಗಿ ಕುಳಿತು ಖ್ಯಾತ ಐಟಿ ವೃತ್ತಿಪರರು ಮತ್ತು ಕ್ರಿಪ್ಟೋಗ್ರಾಫರ್‌ಗಳು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಆಲಿಸಬೇಕು ಎಂದು ಶರದ್‌ ಪವಾರ್ ವಿವಿಧ ಪ್ರತಿಪಕ್ಷಗಳ ನಾಯಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 

ಇದನ್ನು ಓದಿ: ಇಂದಿರಾ ಗಾಂಧಿಯೂ ಇದೇ ಪರಿಸ್ಥಿತಿ ಎದುರಿಸಿದ್ರು: ಶಿವಸೇನೆ ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ ಸಂತೈಸಿದ ಶರದ್ ಪವಾರ್

ಶರದ್‌ ಪವಾರ್ ಅವರ ಸ್ಥಾನಮಾನವನ್ನು ಗಮನದಲ್ಲಿಟ್ಟುಕೊಂಡು ಹಲವಾರು ವಿರೋಧ ಪಕ್ಷಗಳ ನಾಯಕರು ಇಂದು ಸಂಜೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಬಿಜೆಪಿಯನ್ನು ಒಟ್ಟಾಗಿ ಎದುರಿಸಲು ವಿಪಕ್ಷಗಳಲ್ಲಿ ಒಗ್ಗಟ್ಟು ತರಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಯುತ್ತಿದ್ದು, ಪ್ರಾಮುಖ್ಯತೆ ಪಡೆದುಕೊಂಡಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಹಾಗೂ  ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಅನ್ನು ಹೊರಗಿಟ್ಟು ತೃತೀಯ ರಂಗ ರಚನೆಗೆ, ಬಿಜೆಪಿ ವಿರುದ್ಧ ಒಗ್ಗಟ್ಟಾಗಿರಲು ಕೆಲವು ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿಯಾಗಿ ಹರಡಿಕೊಂಡಿರುವುದರಿಂದ ತನ್ನ ಅಸ್ತಿತ್ವ ಇಲ್ಲದೆ ವಿರೋಧ ಪಕ್ಷದ ಮೈತ್ರಿ ಸಾಧ್ಯವಿಲ್ಲ ಎಂದು ಕೈ ಪಕ್ಷ ಸಮರ್ಥಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಬಿಜೆಪಿ ಸೋಲಿಸಲು ವಿಪಕ್ಷಗಳಿಗೆ 3 ಸಲಹೆ ಕೊಟ್ಟ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

ಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇವೆ. 2023 ರಲ್ಲಿ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಹಾಗೂ 2024 ರಲ್ಲಿ ಲೋಕಸಭೆ ಚುನಾವಣೆ ಸೇರಿ ಹಲವು ಚುನಾವಣೆಗಳ ಹಿನ್ನೆಲೆ ಇಂದು ಮತ್ತೆ ವಿಪಕ್ಷಗಳು ಸಭೆ ನಡೆಸುತ್ತಿವೆ. ಈಗಾಗಲೇ ಚುನಾವಣೆ ಆಯೋಗ ಇವಿಎಂಗಳ ಪ್ರಾತ್ಯಕ್ಷಿಕೆ ನಡೆಸಿದ್ದು, ಹ್ಯಾಕ್‌ ಬಗ್ಗೆ ಚಾಲೆಂಜ್‌ ಮಾಡಲು ಸಹ ಅವಕಾಶ ನೀಡಿತ್ತು. ಆದರೆ, ಆ ವೇಳೆ ಅದನ್ನು ಹ್ಯಾಕ್‌ ಮಾಡಲು ಸಾಧ್ಯವಾಗಿರಲಿಲ್ಲ. ಆದರೂ, ವಿಪಕ್ಷಗಳು ಮಾತ್ರ ವಿದ್ಯುನ್ಮಾನ ಮತ ಯಂತ್ರಗಳ ಬಗ್ಗೆ ಆರೋಪಿಸುತ್ತಲೇ ಇವೆ.

ಇದನ್ನೂ ಓದಿ: Adani ಕೇಸ್‌: ಇ.ಡಿ. ಕಚೇರಿ ಮುತ್ತಿಗೆಗೆ ವಿಪಕ್ಷಗಳ ಯತ್ನ; ತನಿಖೆ ಕೋರಿ ಇ - ಮೇಲ್‌ನಲ್ಲೇ ದೂರು

Latest Videos
Follow Us:
Download App:
  • android
  • ios