ನವದೆಹಲಿ(ಫೆ.05): ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುವ ವಿಪಕ್ಷಗಳ ಸಂಸದರ ಆಕಾಂಕ್ಷೆಗೆ ದಿಲ್ಲಿ ಪೊಲೀಸರು ತಣ್ಣೀರೆರಚಿದ್ದಾರೆ.

ಇತ್ತೀಚೆಗಷ್ಟೇ ಗಾಜಿಪುರಕ್ಕೆ ಭೇಟಿ ನೀಡಿದ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರು ಪ್ರತಿಭಟನಾಕಾರರಿಗೆ ನೈತಿಕ ಸ್ಥೈರ್ಯ ತುಂಬಿದ್ದರು. ಅದೇ ರೀತಿ ಗುರುವಾರ ವಿಪಕ್ಷಗಳಾದ ಶಿರೋಮಣಿ ಅಕಾಲಿದಳ, ಡಿಎಂಕೆ, ಎಸ್‌ಸಿಪಿ ಹಾಗೂ ತೃಣಮೂಲ ಸೇರಿದಂತೆ 10 ಪಕ್ಷಗಳ 15 ಸದಸ್ಯರು ಗಾಜಿಪುರಕ್ಕೆ ತೆರಳಿದ್ದರು. ಆದರೆ ತಮ್ಮನ್ನು ದಾರಿಮಧ್ಯೆಯೇ ತಡೆದ ಪೊಲೀಸರು, ಪ್ರತಿಭಟನಾ ಸ್ಥಳಕ್ಕೆ ತೆರಳದಂತೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟದಂತೆ ತಡೆದರು ಎಂದು ವಿಪಕ್ಷಗಳ ಸದಸ್ಯರು ದೂರಿದ್ದಾರೆ.

ವಿಪಕ್ಷಗಳ ಸಂಸದರ ಈ ನಿಯೋಗದಲ್ಲಿ ಎಸ್‌ಎಡಿ ಸಂಸದೆ ಹರ್‌ಸಿಮ್ರತ್‌ ಕೌರ್‌ ಬಾದಲ್‌, ಸುಪ್ರಿಯಾ ಸುಳೆ, ಕನಿಮೋಳಿ, ತಿರುಚಿ ಶಿವಾ, ಸೌಗತಾ ರಾಯ್‌ ಸೇರಿದಂತೆ ಇನ್ನಿತರರು ಇದ್ದರು.