ಇಂಫಾಲ್(ಜೂ.19)‌: ಈಶಾನ್ಯ ರಾಜ್ಯಗಳ ಪೈಕಿ ಒಂದಾದ ಮಣಿಪುರ ರಾಜಕೀಯ ಕ್ಷಿಪ್ರ ಕ್ರಾಂತಿಗೆ ಸಾಕ್ಷಿಯಾಗಿದೆ. ಬಿಜೆಪಿಯ ಮೂವರು ಸೇರಿದಂತೆ 9 ಸಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮುಖ್ಯಮಂತ್ರಿ ಎನ್‌. ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್‌ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅವಿಶ್ವಾಸ ಗೊತ್ತುವಳಿಯಲ್ಲಿ ಸೋಲಾದರೆ, 2017ರಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ.

ಇದೇ ವೇಳೆ ಬಿಜೆಪಿಗೆ ಬೆಂಬಲ ನೀಡಿದ್ದ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯು ಕಾಂಗ್ರೆಸ್‌ ಜೊತೆ ಸೇರಿ ಜಾತ್ಯತೀತ ಪ್ರಗತಿ ರಂಗ ಎಂಬ ಹೊಸ ಮೈತ್ರಿಕೂಟವೊಂದನ್ನು ರಚಿಸಿಕೊಂಡಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತ ಭಾರಿ ಬಹುಮತದ ಆಯ್ಕೆ

ಇದರಿಂದಾಗಿ 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಸಂಖ್ಯಾ ಬಲ 29ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ನಲ್ಲಿ 20 ಶಾಸಕರಿದ್ದು, ರಾಜೀನಾಮೆ ನೀಡಿದ ಎನ್‌ಪಿಪಿ- 4, ಬಿಜೆಪಿ- 3, ಟಿಎಂಸಿ- 1, ಪಕ್ಷೇತರ-1 ಶಾಸಕರು ಬೆಂಬಲ ನೀಡಿದ್ದಾರೆ.

ಇದೇ ವೇಳೆ 18 ಬಿಜೆಪಿ ಶಾಸಕರು, ನಾಗಾ ಪೀಪಲ್ಸ್‌ ಫ್ರಂಟ್‌ನ 4 ಮತ್ತು ಎಲ್‌ಜೆಪಿಯ ಒಬ್ಬ ಶಾಸಕರ ಬೆಂಬಲದೊಂದಿಗೆ ಮುಖ್ಯಮಂತ್ರಿ ಬೀರೇನ್‌ ಸಿಂಗ್‌ ಅವರ ಬಲ 23ಕ್ಕೆ ಇಳಿಕೆಯಾಗಿದೆ. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ 7 ಮಂದಿ ಶಾಸಕರು ಅನರ್ಹತೆಯನ್ನು ಎದುರಿಸುತ್ತಿದ್ದಾರೆ.