ಪಾಕಿಸ್ತಾನ ಮೂಲದ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಭದ್ರತೆಗಾಗಿ ಭಾರತ ಸರ್ಕಾರವು OTT ವೇದಿಕೆಗಳಲ್ಲಿ ಪಾಕಿಸ್ತಾನಿ ವಿಷಯ ಪ್ರಸಾರವನ್ನು ನಿಷೇಧಿಸಿದೆ. ವೆಬ್ ಸರಣಿ, ಚಲನಚಿತ್ರ, ಹಾಡು, ಪಾಡ್‌ಕ್ಯಾಸ್ಟ್ ಸೇರಿದಂತೆ ಎಲ್ಲಾ ರೀತಿಯ ಪಾಕಿಸ್ತಾನಿ ಮೂಲದ ವಿಷಯ ತಕ್ಷಣವೇ ನಿಲ್ಲಬೇಕೆಂದು ಸೂಚಿಸಿದೆ. ಏಪ್ರಿಲ್ 22ರ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸಲಾಗಿದೆ.
ನವದೆಹಲಿ (ಮೇ.8): ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು 26 ನಾಗರಿಕರನ್ನು ಕೊಂದ ನಂತರ, ಭದ್ರತಾ ಕ್ರಮಗಳ ಸರಣಿಯಲ್ಲಿ ಇತ್ತೀಚಿನದಾಗಿ, ಪಾಕಿಸ್ತಾನ ಮೂಲದ ಎಲ್ಲಾ ಕಂಟೆಂಟ್‌ಅನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸರ್ಕಾರ ಗುರುವಾರ ಆನ್‌ಲೈನ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೊರಡಿಸಿದ ಆದೇಶದಲ್ಲಿ, "ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ OTT ಪ್ಲಾಟ್‌ಫಾರ್ಮ್‌ಗಳು, ಮಾಧ್ಯಮ ಸ್ಟ್ರೀಮಿಂಗ್ ಸರ್ವೀಸ್‌ಗಳು ಮತ್ತು ಮಧ್ಯವರ್ತಿಗಳು ಪಾಕಿಸ್ತಾನ ಮೂಲದ ವೆಬ್ ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು ಮತ್ತು ಇತರ ಸ್ಟ್ರೀಮಿಂಗ್ ವಿಷಯವನ್ನು ತಕ್ಷಣವೇ ನಿಲ್ಲಿಸಬೇಕು" ಎಂದು ಕೇಳಲಾಗಿದೆ. ಚಂದಾದಾರಿಕೆ ಆಧಾರಿತ ಮಾದರಿಗಳ ಮೂಲಕ ನೀಡುತ್ತಿದ್ದಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ನೀಡುತ್ತಿದ್ದರೂ ಅದನ್ನು ತಕ್ಷಣದಿಂದಲೇ ನಿಲ್ಲಸಬೇಕು ಎಂದು ತಿಳಿಸಲಾಗಿದೆ.
"ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ" ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
"ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳು ಪಾಕಿಸ್ತಾನ ಮೂಲದ ರಾಜ್ಯ ಮತ್ತು ರಾಜ್ಯೇತರ ಪಾತ್ರಗಳೊಂದಿಗೆ ಗಡಿಯಾಚೆಗಿನ ಸಂಪರ್ಕವನ್ನು ಹೊಂದಿವೆ ಎಂದು ಕಂಡುಬಂದಿದೆ. ಇತ್ತೀಚೆಗೆ, ಏ.22 ರಂದು, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಹಲವಾರು ಭಾರತೀಯರು, ಒಬ್ಬ ನೇಪಾಳಿ ನಾಗರಿಕರ ಹತ್ಯೆಗೆ ಮತ್ತು ಇತರ ಹಲವಾರು ಜನರಿಗೆ ಗಾಯಗಳಿಗೆ ಕಾರಣವಾಯಿತು" ಎಂದು ಸಚಿವಾಲಯವು ಈ ಕ್ರಮದ ಹಿಂದಿನ ತಾರ್ಕಿಕತೆಯನ್ನು ವಿವರಿಸಿದೆ.


