ಭೋಲೇ ಬಾಬಾನ ಈ ಆಶ್ರಮಕ್ಕೆ ಮಹಿಳೆಯರಿಗಷ್ಟೇ ಪ್ರವೇಶ! ಹಾಥ್ರಸ್ ದುರಂತ ಹಿಂದೆ ಪಿತೂರಿ: ಎಸ್‌ಐಟಿ ಶಂಕೆ
ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಇತ್ತೀಚೆಗೆ ನಡೆದ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ, ಭೋಲೇ ಬಾಬಾನ ಮತ್ತೊಂದು ನಿಗೂಢ ಕಥೆ ಬೆಳಕಿಗೆ ಬಂದಿದೆ.
ಲಖನೌ: ಉತ್ತರಪ್ರದೇಶದ ಹಾಥ್ರಸ್‌ನಲ್ಲಿ ಇತ್ತೀಚೆಗೆ ನಡೆದ ಸತ್ಸಂಗದ ವೇಳೆ ನಡೆದ ಕಾಲ್ತುಳಿತದಲ್ಲಿ 121 ಭಕ್ತರು ಸಾವನ್ನಪ್ಪಿದ ಬೆನ್ನಲ್ಲೇ, ಭೋಲೇ ಬಾಬಾನ ಮತ್ತೊಂದು ನಿಗೂಢ ಕಥೆ ಬೆಳಕಿಗೆ ಬಂದಿದೆ. ಯಾರಿಂದಲೂ ದೇಣಿಗೆ ಸ್ವೀಕರಿಸದ ಬಾಬಾ 100 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿದ ಕುರಿತು ತನಿಖೆ ಆರಂಭವಾದ ಬೆನ್ನಲ್ಲೇ, ರಾಜಸ್ಥಾನದಲ್ಲಿ ಬಾಬಾ ಹೊಂದಿರುವ ಆಶ್ರಮವೊಂದಕ್ಕೆ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ರಾಜಸ್ಥಾನದ ಆಲ್ವರ್‌ನ ಸಹಜ್‌ಪುರ್ ಎಂಬ ಹಳ್ಳಿಯಲ್ಲಿರುವ ಆಶ್ರಮಕ್ಕೆ ಮಹಿಳೆಯರಿಗಷ್ಟೇ ಪ್ರವೇಶಿಸಲು ಅನುಮತಿ ಇದೆ. 2010ರಿಂದ ನಡೆದು ಬರುತ್ತಿರುವ ಈ ನಿಯಮವನ್ನು ಉಲ್ಲಂಘಿಸಿ ಪುರುಷರು ಆಶ್ರಮ ಪ್ರವೇಶಕ್ಕೆ ಯತ್ನಿಸಿದರೆ ಬಾಬಾರ ಅನುಯಾಯಿಗಳಿಂದ ಥಳಿತಕ್ಕೆ ಒಳಗಾಗಬೇಕಾಗುತ್ತದೆ. ದುರಂತವೆಂದರೆ ಪುರುಷ ಭಕ್ತರು ಇದನ್ನೂ ಆಶೀರ್ವಾದವೆಂದೇ ತಿಳಿದು ಸುಮ್ಮನಾಗುತ್ತಾರೆ ಎಂದು ವರದಿಗಳು ತಿಳಿಸಿವೆ.
ವಿಷಕಾರಿ ಕ್ಯಾನ್‌ಗಳನ್ನು ಸಿಡಿಸಿ ಹಾಥ್ರಸ್‌ನಲ್ಲಿ 121 ಜನರ ಹತ್ಯೆ?: ಬಾಬಾ ಪರ ವಕೀಲ ಹೇಳಿದ್ದೇನು?
ಹಾಥ್ರಸ್ ಕಾಲ್ತುಳಿತ ಹಿಂದೆ ಪಿತೂರಿ: ಎಸ್‌ಐಟಿ ಶಂಕೆ
ಲಕ್ನೋ: ಹಾಥ್ರಸ್‌ನಲ್ಲಿ ವಿವಾದಾತ್ಮಕ ಧರ್ಮಗುರು ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಹಿಂದೆ ದೊಡ್ಡ ಪಿತೂರಿ ನಡೆದಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಉತ್ತರ ಪ್ರದೇಶ ವಿಶೇಷ ತನಿಖಾ ತಂಡ (ಎಸ್ಐಟಿ) ಹೇಳಿದೆ.
ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿರುವ ಎಸ್‌ಐಟಿ, ಪ್ರತ್ಯಕ್ಷದರ್ಶಿಗಳು ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಕಾಲ್ತುಳಿತಕ್ಕೆ ಕಾರ್ಯಕ್ರಮದ ಆಯೋಜಕರೇ ಪ್ರಾಥಮಿಕ ಹೊಣೆಗಾರರು. ಅಲ್ಲದೆ, ಈ ಸ್ಥಳಕ್ಕೆ ಅನುಮತಿ ನೀಡುವ ಮುನ್ನ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳ ಪರಿಶೀಲನೆಯನ್ನೂ ಮಾಡಿಲ್ಲ ಎಂದಿದೆ. ಆದರೆ ಇದೇ ವೇಳೆ, ಯಾವುದೇ ದೊಡ್ಡ ಪಿತೂರಿಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಸಂಪೂರ್ಣ ತನಿಖೆಯ ಅಗತ್ಯ ಇದೆ ಎಂದು ಒತ್ತಿ ಹೇಳಿದೆ. ಇತ್ತೀಚೆಗೆ ಸತ್ಸಂಗದ ರೂವಾರಿ, ಭೋಲೆ ಬಾಬಾನ ವಕೀಲರು ಮಾತನಾಡಿ, ಕೆಲವು ಅಪರಿಚಿತ ವ್ಯಕ್ತಿಗಳು ಸಿಂಪಡಿಸಿದ ಕೆಲವು ವಿಷಕಾರಿ ವಸ್ತುಗಳು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಪಿತೂರಿಯ ಶಂಕೆಯನ್ನು ಎಸ್ಐಟಿ ವ್ಯಕ್ತಪಡಿಸಿರುವುದು ಇಲ್ಲಿ ಗಮನಾರ್ಹ.
ಒಂದು ಪೈಸೆಯೂ ದಾನ ಪಡೆಯಲ್ಲ ಅಂತಿದ್ದ ಭೋಲೆಬಾಬಾನ ಆಸ್ತಿ ಒಂದಲ್ಲ ಎರಡಲ್ಲ 100 ಕೋಟಿ
ಅಮಾನತು:
ಹತ್ರಾಸ್ ಕಾಲ್ತುಳಿತದ ಎಸ್‌ಐಟಿ ವರದಿಯ ಆಧಾರದ ಮೇಲೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸ್ಥಳೀಯ ಉಪವಿಭಾಗ ಅಧಿಕಾರಿ, ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇತರ ನಾಲ್ವರನ್ನು ಅಮಾನತುಗೊಳಿಸಿದೆ.
ಪಾದಧೂಳಿ ಸಂಗ್ರಹಿಸಲು ಬಾಬಾ ಕರೆಯೇ ಕಾಲ್ತುಳಿತಕ್ಕೆ ಕಾರಣ: ಸಾಕ್ಷಿಗಳು
ಲಖನೌ: ತಮ್ಮ ಪಾದಧೂಳಿ ಸಂಗ್ರಹಿಸಲು ಭೋಲೆ ಬಾಬಾ ನೀಡಿದ್ದ ಕರೆಯೇ ಕಾಲ್ತುಳಿತಕ್ಕೆ ಕಾರಣ ಎಂದು ಹಾಥ್ರಸ್ ಕಾಲ್ತುಳಿತ ದುರಂತದ ಕೆಲವು ಸಾಕ್ಷಿಗಳು ಹೇಳಿದ್ದಾರೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬ್ರಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದ ಮೂವರು ಸದಸ್ಯರ ನ್ಯಾಯಾಂಗ ಆಯೋಗದ ಮುಂದೆ 34 ಸಾಕ್ಷಿಗಳು ಹಾಜರಾಗಿ ಹೇಳಿಕೆ ನೀಡಿ, ಭೋಲೆ ಬಾಬಾ ಅವರು ನಿಮ್ಮ ಎಲ್ಲಾ ಕಾಯಿಲೆಗಳು ಗುಣ ಆಗಬೇಕು ಎಂದರೆ ನನ್ನ ಪಾದಧೂಳಿ ಸಂಗ್ರಹಿಸಿ ಎಂದು ಭಕ್ತರಿಗೆ ಕರೆ ನೀಡಿದರು. ಆಗ ಜನರು ಪಾದಧೂಳಿ ಸಂಗ್ರಹಿಸಲು ಮುಗಿಬಿದ್ದರು. ಇದು ಕಾಲ್ತುಳಿತಕ್ಕೆ ನಾಂದಿ ಹಾಡಿತು ಎಂದಿದ್ದಾರೆ.