10ರಲ್ಲಿ ಒಬ್ಬ ಭಾರತೀಯಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್!
10ರಲ್ಲಿ ಒಬ್ಬ ಭಾರತೀಯಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್| ಪ್ರತಿ 15 ಭಾರತೀಯರಲ್ಲಿ ಒಬ್ಬಾತ ಕ್ಯಾನ್ಸರ್‌ಗೆ ಬಲಿ| 2018ರಲ್ಲಿ 10 ಲಕ್ಷ ಭಾರತದ ಜನರಿಗೆ ಅಂಟಿದ ರೋಗ| ವಿಶ್ವ ಆರೋಗ್ಯ ಸಂಸ್ಥೆ ಕಳವಳ
ವಿಶ್ವಸಂಸ್ಥೆ[ಫೆ.05]: ಪ್ರತಿ 10 ಭಾರತೀಯರಲ್ಲಿ ಒಬ್ಬನಿಗೆ ಆತನ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗ ಅಂಟುತ್ತದೆ. 15 ಭಾರತೀಯರಲ್ಲಿ ಒಬ್ಬಾತ, ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಇದಲ್ಲದೆ, 2018ರಲ್ಲಿ 10 ಲಕ್ಷ ಭಾರತೀಯರಿಗೆ ಕ್ಯಾನ್ಸರ್ ಅಂಟಿದೆ ಎಂದೂ ಅದು ತಿಳಿಸಿದೆ.
ಮಂಗಳವಾರ ನಡೆದ ‘ವಿಶ್ವ ಕ್ಯಾನ್ಸರ್ ದಿನಾಚರಣೆ’ ಹಿನ್ನೆಲೆಯಲ್ಲಿ 2 ವರದಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ), ಬಿಡುಗಡೆ ಮಾಡಿದೆ. ಮೊದಲ ವರದಿ ಕ್ಯಾನ್ಸರ್ ವಿರುದ್ಧ ಜಾಗತಿಕ ಕಾರ್ಯಸೂಚಿ ರೂಪಿಸುವ ಉದ್ದೇಶ ಹೊಂದಿದೆ. 2ನೇ ವರದಿ ಕ್ಯಾನ್ಸರ್ ಸಂಶೋಧನೆ ಹಾಗೂ ತಡೆ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ.
2018ರಲ್ಲಿ ಭಾರತದಲ್ಲಿ 10.16 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿವೆ. 7,84,800 ಸಾವುಗಳು ಸಂಭವಿಸಿವೆ. ಕಳೆದ 5 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಭಾರತೀಯರ ಸಂಖ್ಯೆ 20.26 ಲಕ್ಷ ಎಂದು ವರದಿ ಹೇಳಿದೆ.
ಇನ್ನು ಪ್ರತಿ 10 ಭಾರತೀಯರಲ್ಲಿ ಒಬ್ಬನಿಗೆ ಜೀವಿತಾವಧಿಯಲ್ಲಿ ಕ್ಯಾನ್ಸರ್ ತಗಲುತ್ತದೆ. 15 ಭಾರತೀಯರಲ್ಲಿ ಒಬ್ಬಾತ ಕ್ಯಾನ್ಸರ್‌ಗೆ ಬಲಿಯಾಗುತ್ತಾನೆ. ಎಂದು ವರದಿ ವಿವರಿಸಿದೆ.
ಭಾರತದಲ್ಲಿ 6 ಥರದ ಕ್ಯಾನ್ಸರ್ ಸಾಮಾನ್ಯವಾಗಿವೆ. ಅವು ಸ್ತನ ಕ್ಯಾನ್ಸರ್ (1,62,500 ಪ್ರಕರಣ), ಬಾಯಿ ಕ್ಯಾನ್ಸರ್ (1,20,000), ಗರ್ಭಕೋಶ ಕ್ಯಾನ್ಸರ್ (97,000), ಶ್ವಾಸಕೋಶ ಕ್ಯಾನ್ಸರ್ (68,000), ಉದರ ಕ್ಯಾನ್ಸರ್ (57,000), ಕರುಳು ಕ್ಯಾನ್ಸರ್ (57,000).
ಒಟ್ಟು ಕ್ಯಾನ್ಸರ್ ಪೀಡಿತರನ್ನು ಗಮನಿಸಿದರೆ ಈ 6 ವಿಧದ ಕ್ಯಾನ್ಸರ್‌ಗಳ ಪಾಲು ಶೇ.49.
ಕಾರಣ ಏನು?:
ತಂಬಾಕು ಸೇವನೆಯಿಂದ ತಲೆ ಹಾಗೂ ಕುತ್ತಿಗೆ ಕ್ಯಾನ್ಸರ್ ಬರುತ್ತದೆ. ಬಾಯಿ ಕ್ಯಾನ್ಸರ್‌ಗೆ ಕೂಡ ಇದು ಕಾರಣ. ಇದು ಪುರುಷರಲ್ಲಿ ಹೆಚ್ಚು. ಇನ್ನು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಿದೆ ಎಂದು ಡಬ್ಲ್ಯುಎಚ್‌ಒ ವರದಿ ಹೇಳಿದೆ. ಗರ್ಭಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್‌ಗೆ ಧಡೂತಿ ದೇಹ, ಹೆಚ್ಚಿನ ತೂಕ, ದೈಹಿಕ ಚಟುವಟಿಕೆ ಮಾಡದೇ ಸುಮ್ಮನೇ ಕೂರುವುದು, ಅಮಲು ಬರಿಸುವ ವಸ್ತುಗಳ ಸೇವನೆ- ಇತ್ಯಾದಿಗಳು ಕಾರಣ.
ಶೇ.60 ಹೆಚ್ಚಳ ಎಚ್ಚರಿಕೆ:
ಬಡ ಹಾಗೂ ಅಭಿವೃದ್ಧಿಶೀಲ ದೇಶಗಳಲ್ಲಿ ಸೂಕ್ತ ಕ್ರಮ ಜರುಗಿಸದೇ ಹೋದರೆ ಜಾಗತಿಕ ಕ್ಯಾನ್ಸರ್ ಪ್ರಮಾಣ ಮುಂದಿನ 20 ವರ್ಷದಲ್ಲಿ ಶೇ.60ರಷ್ಟುಹೆಚ್ಚಬಹುದು ಎಂದು ಅದು ಎಚ್ಚರಿಸಿದೆ.