ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್‌ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್‌ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಶ್ರೀನಗರ: ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್‌ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್‌ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಕುಲ್ಗಾಮ್‌ ನಿವಾಸಿ 26 ವರ್ಷದ ಮೊಹಮ್ಮದ್‌ ಯೂಸುಫ್‌ ಕಟಾರಿಯಾ ಎಂಬಾತ ಬಂಧಿತ. ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್‌ ಫ್ರಂಟ್‌ ( ಟಿಆರ್‌ಎಫ್‌) ಉಗ್ರರಿಗೆ ಸಹಾಯ ಮಾಡಿರುವ ಆರೋಪ ಈತನ ಮೇಲಿದೆ. ಪಹಲ್ಗಾಂ ನರಮೇಧದಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಸೇನೆಯು ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆ ನಡೆಸಿ ಹತ್ಯೆಗೈದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ಅವುಗಳ ವಿಧಿವಿಜ್ಞಾನ ತನಿಖೆಯ ಆಧಾರದಲ್ಲಿ ಈತನ ಬಂಧನವಾಗಿದೆ.ಗುತ್ತಿಗೆ ಕೆಲಸ ಮಾಡುತ್ತಿದ್ದ ಈತ, ಸ್ಥಳೀಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ.

ಕೆಲವು ತಿಂಗಳ ಹಿಂದೆ ಭಯೋತ್ಪಾದಕ ಸಂಪರ್ಕಕ್ಕೆ ಬಂದು ಅವರಿಗೆ ನೆರವು ನೀಡಲು ಪ್ರಾರಂಭಿಸಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. ಇದರ ಜತೆಗೆ ಪಹಲ್ಗಾಂ ದಾಳಿಗೂ ಮುನ್ನ ಕುಲ್ಗಾಮ್‌ನ ಅರಣ್ಯಪ್ರದೇಶಗಳಲ್ಲಿ ಸಂಚರಿಸಲು ಲಷ್ಕರ್‌ ಉಗ್ರರಿಗೆ ನೆರವು ನೀಡಿದ್ದ ಎನ್ನುವುದು ತನಿಖೆಯಿಂದ ಬಯಲಾಗಿದೆ.ಕಳೆದ ಜೂನ್‌ ತಿಂಗಳಿನಲ್ಲಿ ಎನ್‌ಐಎ ಅಧಿಕಾರಿಗಳು ಪಹಲ್ಗಾಂ ಕೃತ್ಯಕ್ಕೆ ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಾಟ್‌ಕೋಟ್‌ನ ಪರ್ವೇಜ್‌ ಅಹಮದ್‌ ಜೋಥರ್‌ ಮತ್ತು ಪಹಲ್ಗಾಂನ ಹಿಲ್‌ ಪಾರ್ಕ್‌ನ ಬಶೀರ್‌ ಅಹಮದ್‌ ಜೋಥರ್‌ ಎನ್ನುವ ಇಬ್ಬರನ್ನು ಬಂಧಿಸಿದ್ದರು.

ತಡರಾತ್ರಿ ಸಿಂದೂರ ದಾಳಿಗೆ ಎರಡು ವಿಶೇಷ ಕಾರಣಗಳು!

ನವದೆಹಲಿ: ಪಹಲ್ಗಾಂ ಉಗ್ರದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ವಿರುದ್ಧ ಭಾರತ ಕೈಗೊಂಡ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ 1 ಗಂಟೆಗೇ ಏಕೆ ಕೈಗೊಳ್ಳಲಾಯಿತು ಎಂಬ ಅಚ್ಚರಿಯ ವಿಷಯವನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥ ಜ. ಅನಿಲ್‌ ಚೌಧರಿ ಬಹಿರಂಗಪಡಿಸಿದ್ದಾರೆ.

ದೆಹಲಿಯ ರಾಜಭವನದಲ್ಲಿ ಗುರುವಾರ ಸಂವಾದ ನಡೆಸಿದ ಅವರು, ‘2019ರಲ್ಲಿ ನಾವು ಬಾಲಾಕೋಟ್‌ ದಾಳಿ ನಡೆಸಿದಾಗ ನಮ್ಮ ಬಳಿ ಉಪಗ್ರಹ ಚಿತ್ರ ಅಥವಾ ಫೋಟೋಗಳಿರಲಿಲ್ಲ. ಆದರೆ ಆಪರೇಷನ್‌ ಸಿಂದೂರವನ್ನು ಮೇ 7ರ ಮಧ್ಯರಾತ್ರಿ ಕೈಗೊಳ್ಳಲು 2 ಮುಖ್ಯ ಕಾರಣಗಳಿದ್ದವು. ಮೊದಲನೆಯದಾಗಿ, ದಾಳಿಯ ಚಿತ್ರ ತೆಗೆದುಕೊಳ್ಳಬಲ್ಲ ನಮ್ಮ ಸಾಮರ್ಥ್ಯಗಳಲ್ಲಿ ನಮಗೆ ವಿಶ್ವಾಸವಿತ್ತು. ಎರಡನೆಯದಾಗಿ, ಬೆಳಗಿನ ಜಾವ ನಮಾಜ್‌ ಸಮಯವಾದ್ದರಿಂದ ಆಗ ನಾಗರಿಕರು ಹೊರಗೆ ಬರುವ ಸಾಧ್ಯತೆಯಿತ್ತು. ಆಗ ದಾಳಿ ನಡೆಸಿದರೆ ನಾಗರಿಕರು ಅಪಾಯಕ್ಕೆ ಸಿಲುಕುತ್ತಿದ್ದರು. ಅವರ ಸಾವುನೋವುಗಳನ್ನು ತಪ್ಪಿಸುವ ಉದ್ದೇಶದಿಂದ ರಾತ್ರಿ 1 ಗಂಟೆಗೇ ದಾಳಿ ನಡೆಸಿದೆವು’ ಎಂದಿದ್ದಾರೆ.

‘ದಾಳಿಗೆ ಬೆಳಿಗ್ಗೆ 5.30 ಅಥವಾ 6 ಗಂಟೆಯ ಸಮಯ ಉತ್ತಮ ಆಯ್ಕೆ ಆಗುತ್ತಿತ್ತು. ಆದರೆ ಅದು ಮೊದಲ ಅಜಾನ್ ಅಥವಾ ನಮಾಜ್ ಸಮಯ. ಅನೇಕ ನಾಗರಿಕ ಜೀವಗಳು ಬಲಿಯಾಗುತ್ತಿದ್ದವು. ನಾವು ಅದನ್ನು ಸಂಪೂರ್ಣವಾಗಿ ತಪ್ಪಿಸಲು ಬಯಸಿದ್ದೆವು’ ಎಂದು ತಿಳಿಸಿದ್ದಾರೆ