ನವದೆಹಲಿ[ಫೆ.14]: ಫೆಬ್ರವರಿ 14 ವಿಶ್ವದೆಲ್ಲೆಡೆ ಇದು ಇಂದು ಪ್ರೇಮಿಗಳ ದಿನ. ಭಾರತದಲ್ಲೂ ಪ್ರೇಮಿಗಳು ಈ ದಿನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಆದರೆ ಇದನ್ನು ಹೊರತುಪಡಿಸಿ ಭಾರತಕ್ಕೆ ಇದು ವಿಭಿನ್ನ ಕಾರಣಗಳಿಂದ ಮಹತ್ತರವಾದ ದಿನ. ಒಂದೆಡೆ ಪುಲ್ವಾಮಾ ದಾಳಿ, ಭಗತ್ ಸಿಂಗ್ ನೇಣಿಗೇರಿಸಿದ ಕಹಿ ನೆನಪು. ಮತ್ತೊಂದೆಡೆ ದೇಶ ಕಂಡ ಅತ್ಯದ್ಭುತ ರಾಜಕೀಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಹುಟ್ಟುಹಬ್ಬ.

ಏಮ್ಸ್ ಸಾಕು ವಿದೇಶಿ ಆಸ್ಪತ್ರೆ ಬೇಡವೆಂದಿದ್ದ ಸುಷ್ಮಾ ಸ್ವರಾಜ್!

ಹೌದು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಗಣ್ಯ ನಾಯಕರಲ್ಲಿ ಸುಷ್ಮಾ ಸ್ವರಾಜ್ ಕೂಡಾ ಒಬ್ಬರು. ರಾಜಕೀಯದಲ್ಲಿ ಅದೆಷ್ಟು ಶಿಸ್ತಿನ ನಾಯಕಿಯಾಗಿದ್ದರೋ ಅಷ್ಟೇ, ಪ್ರೀತಿಯ ಮಡದಿ ಹಾಗೂ ತಾಯಿ ಕೂಡಾ ಅವರಾಗಿದ್ದರು. ಹೀಗಿರುವಾಗ ಒಡತಿ ಇಲ್ಲದ ಮನೆಯಲ್ಲಿ, ಆಕೆಯ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಅವರ ಪತಿ ಕೋರಿದ ಶುಭಾಷಯಗಳು ಬಹುತೇಕರನ್ನು ಭಾವುಕರನ್ನಾಗಿಸಿದೆ. ಸುಷ್ಮಾ ಜನ್ಮ ಜಯಂತಿಯಂದು ಪತ್ನಿಯನ್ನು ನೆನಪಿಸಿಕೊಂಡಿರುವ ಸ್ವರಾಜ್ ಕೌಶಲ್ ಟ್ವೀಟ್ ಒಂದನ್ನು ಮಾಡುತ್ತಾ 'ಹುಟ್ಟುಹಬ್ಬದ ಶುಭಾಶಯಗಳು ಸುಷ್ಮಾ ಸ್ವರಾಜ್, ನಮ್ಮ ಜೀವನದ ಸಂತೋಷ ಆಕೆ' ಎಂದು ಬರೆದಿದ್ದಾರೆ.

ಇನ್ನು ಸುಷ್ಮಾ ಸ್ವರಾಜ್ ಜನ್ಮ ಜಯಂತಿ ಸಂದರ್ಭದಲ್ಲಿ ಸರ್ಕಾರವು ವಿದೇಶಾಂಗ ಇಲಾಖೆಗೆ ಸಂಬಂಧಿಸಿದ ಪ್ರಮುಖ ಎರಡು ಸಂಸ್ಥೆಗಳಿಗೆ ವರ ಹೆಸರಿಡಲು ಸರ್ಕಾರ ನಿರ್ಧರಿಸಿದೆ. ಪ್ರವಾಸೀ ಭಾರತೀಯ ಕೇಂದ್ರವನ್ನು ಸುಷ್ಮಾ ಸ್ವರಾಜ್ ಭವನ್ ಹಾಗೂ ಫಾರಿನ್ ಸರ್ವಿಸ್ ಇನ್ಸ್ಟಿಟ್ಯೂಟ್‌ನ್ನು ಸುಷ್ಮಾ ಸ್ವರಾಜ್‌ ಇನ್ಸ್ಟಿಟ್ಯೂಟ್‌ ಆಫ್ ಫಾರಿನ್ ಸರ್ವಿಸ್ ಎಂದು ಮರುನಾಮಕರಣ ಮಾಡಲು ಸಿದ್ಧತೆ ನಡೆದಿದೆ. 

ಪ್ರೇಮಿಗಳ ದಿನದಂದು ಜನಿಸಿದ ಸುಷ್ಮಾ ಓರ್ವ ಎಲ್ಲರೂ ಇಷ್ಟಪಡುವ ನಾಯಕಿಯಾಗಿದ್ದರು. ರಾಜಕೀಯದಲ್ಲಿ ಅವರು ಬಿಜೆಪಿ ಪಕ್ಷದಲ್ಲಿದ್ದರೂ, ಪ್ರತಿಪಕ್ಷಗಳೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು. ವಿದೇಶಾಂಗ ಸಚಿವೆಯಾಗಿದ್ದಾಗ ಅವರು ಮಾಡಿದ ಕಾರ್ಯ, ತೆಗೆದುಕೊಂಡ ನಿರ್ಧಾರಗಳಿಂದ ಇಡೀ ದೇಶವೇ ಹೆಮ್ಮೆಪಟ್ಟುಕೊಂಡಿತ್ತು. ವಿಶ್ವದ ಯಾವುದೇ ಭಾಗದಲ್ಲಿ ನೀವು ಸಿಲುಕಿಕೊಂಡರೂ ಭಾರತೀಯ ವಿದೇಶಾಂಗ ಸಚಿವಾಲಯ ನಿಮ್ಮ ನೆರವಿಗಿದೆ ಎಂಬ ಭರವಸೆ ಮೂಡಿಸಿದ್ದರು. ನಡು ರಾತ್ರಿಯಾದರೂ ಸರಿ ಒಂದು ಟ್ವೀಟ್ ಮಾಡಿದರೆ ಸಾಕಿತ್ತು. ಕೂಡಲೇ ಪ್ರತಿಕ್ರಿಯಿಸುತ್ತಿದ್ದ 'ಟ್ವಿಟರ್ ಮಿನಿಸ್ಟರ್' ಅವರ ಸಹಾಯಕ್ಕೆ ಧಾವಿಸುತ್ತಿದ್ದರು. 

ಜನಸಾಮಾನ್ಯರಿಗೆ ಸುಷ್ಮಾ ಯಾಕೆ ಇಷ್ಟ? ಈ ಸಾಧನೆಗಳೆ ಹೇಳುತ್ತವೆ ಉತ್ತರ

ಇವರು ರಾಜಕೀಯದಲ್ಲಿ ಅದೆಷ್ಟು ಶಿಸ್ತಿನ ನಾಯಕಿ ಎನಿಸಿಕೊಂಡಿದ್ದರೋ, ಅಷ್ಟೇ ಮಮತಾಮಯಿ ತಾಯಿ ಹಾಗೂ ಪ್ರೀತಿಯ ಮಡದಿಯಾಗಿದ್ದರು. ಆದರೆ ಅವರ ಅಕಾಲಿಕ ನಿಧನ ಕುಟುಂಬ ಸದಸ್ಯರನ್ನು ಅನಾಥರನ್ನಾಗಿಸಿದರೆ, ಪಕ್ಷಕ್ಕೂ ಭರಿಸಲಾರದ ನಷ್ಟವುಂಟು ಮಾಡಿದೆ. ಸುಷ್ಮಾರಿಲ್ಲದ ಮನೆಯಲ್ಲಿ ಮೊದಲ ಬಾರಿ ಅವರ ಜನ್ಮ ಜಯಂತಿ ಆಚರಿಸಲಾಗುತ್ತಿದೆ.

ಇದನ್ನೂ ನೋಡಿ: #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"