ಕೋಲ್ಕತ್ತಾ(ಫೆ.27): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿರುದ್ಧ ಕಿಡಿ ಕಾರಿರುವ ಪ್ರಶಾಂತ್ ಕಿಶೋರ್ ಟ್ವೀಟ್ ಒಂದನ್ನು ಮಾಡುತ್ತಾ 'ಮೇ. 2 ರಂದು ಫಲಿತಾಂಶ ಬಂದ ಬಳಿಕ ನೀವು ನನ್ನ ಹಳೇ ಟ್ವೀಟ್‌ಗಳ ಬಗ್ಗೆ ಮಾತನಾಡಬಹುದು' ಎಂದಿದ್ದಾರೆ.

ಇನ್ನು ಪ್ರಶಾಂತ್ ಕಿಶೋರ್ ತಮ್ಮ ಹಳೇ ಟ್ವೀಟ್‌ನಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಎರಡಂಕಿ ದಾಟುವುದಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಚುನಾವಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ಕಿಶೋರ್‌ ಟಿಎಂಸಿಯ ಘೋಷವಾಕ್ಯ ಹಾಗೂ ಸಿಎಂ ಮಮತಾ ಬ್ಯಾನರ್ಜಿಯವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಟಿಎಂಸಿಯ ಘೋಚಷಣೆಯಾದ ಬಂಗಾಳಕ್ಕೆ ತಮ್ಮ ಮಗಳ ಮೇಲಷ್ಟೇ ನಂಬಿಕೆ ಇದೆ ಎಂದೂ ಬರೆದಿದ್ದಾರೆ. ಇನ್ನು ಡಿಸೆಂಬರ್ 21ರಂದು ಟ್ವೀಟ್ ಮಾಡಿದ್ದ ಪ್ರಶಾಂತ್ ಕಿಶೋರ್ ಒಂದು ವೇಳೆ ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಎರಡಂಕಿಗಿಂತ ಹೆಚ್ಚು ಸ್ಥಾನ ಪಡೆದರೆ ನಾನು ಟ್ವಿಟರ್ ತೊರೆಯುತ್ತೇನೆ ಎಂದೂ ಬರೆದಿದ್ದಾರೆ.

ಇನ್ನು ನಿನ್ನೆ ಶುಕ್ರವಾರ ಚುನಾವಣಾ ಆಯೋಗ ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದೆ. ಮಾರ್ಚ್ 27 ರಿಂದ ಏಪ್ರಿಲ್ 29ರವರೆಗೆ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ.  ಮೇ 2ರಂದು ಫಲಿತಾಂಶ ಹೊರಬೀಳಲಿದೆ.