* ರಾಷ್ಟ್ರ ರಾಜಧಾನಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆ ಬಗ್ಗೆ ಮೋದಿ ಮಾತು* ದೇಶದ ಏಕತೆ ಜತೆ ರಾಜಿ ಇಲ್ಲ: ಮೋದಿ ಖಡಕ್‌ ಮಾತು* ಮತೀಯ ಗಲಭೆಗಳ ಬಗ್ಗೆ ಪ್ರಧಾನಿ ಪರೋಕ್ಷ ಪ್ರಸ್ತಾಪ

ನವದೆಹಲಿ(ಏ.22): ರಾಷ್ಟ್ರ ರಾಜಧಾನಿ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಡೆಯುತ್ತಿರುವ ಮತೀಯ ಘರ್ಷಣೆಗಳ ಬಗ್ಗೆ ಇದೇ ಮೊದಲ ಬಾರಿ ಪರೋಕ್ಷವಾಗಿ ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾವುದೇ ಕಾರಣಕ್ಕೂ ದೇಶದ ಸಮಗ್ರತೆ ಹಾಗೂ ಏಕತೆಯ ಜೊತೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ಗುರುವಾರ ನಾಗರಿಕ ಸೇವೆಗಳ ದಿನಾಚರಣೆಯಲ್ಲಿ ಮಾತನಾಡಿದ ಪ್ರಧಾನಿ, ‘ನಮ್ಮದು ಪ್ರಜಾಪ್ರಭುತ್ವ ದೇಶ. ಇಲ್ಲಿ ಸಮಾನತೆ, ಜಾಗತೀಕರಣ ಹಾಗೂ ಏಕತೆ ಎಂಬ ಮೂರು ಸವಾಲುಗಳು ಇಂದು ನಮ್ಮ ಮುಂದಿವೆ. ಯಾವತ್ತೂ ನಾವು ಭಾರತದ ಏಕತೆ ಹಾಗೂ ಸಮಗ್ರತೆಯ ಜೊತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಹಾಗೂ ಪ್ರತಿಯೊಬ್ಬ ನಾಗರಿಕ ಸೇವಾ ಅಧಿಕಾರಿಯ ಪ್ರಥಮ ಹಾಗೂ ಅತ್ಯುನ್ನತ ಜವಾಬ್ದಾರಿಯಾಗಿದೆ’ ಎಂದು ಹೇಳಿದರು.

ಸ್ವಾತಂತ್ರ್ಯ ದೊರೆತ 100ನೇ ವರ್ಷ ಭಾರತ ಹೇಗಿರಬೇಕು ಎಂಬ ದೂರದೃಷ್ಟಿಯನ್ನು ನಾವು ಎಲ್ಲರೊಂದಿಗೆ ಹಂಚಿಕೊಳ್ಳಬೇಕು. ದೇಶದ ಪ್ರತಿಯೊಂದು ಜಿಲ್ಲೆಯೂ ಮುಂದಿನ 25 ವರ್ಷಗಳಿಗೆ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುವತ್ತ ಶ್ರಮಿಸಬೇಕು ಎಂದೂ ಇದೇ ವೇಳೆ ನಾಗರಿಕ ಸೇವೆಯ ಅಧಿಕಾರಿಗಳನ್ನುದ್ದೇಶಿಸಿ ಮೋದಿ ಹೇಳಿದರು.

ದೆಹಲಿ, ಮಧ್ಯಪ್ರದೇಶ, ತೆಲಂಗಾಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹನುಮಾನ್‌ ಜಯಂತಿ ಮತ್ತು ರಾಮನವಮಿ ಮೆರವಣಿಗೆಗಳ ವೇಳೆ ಮತೀಯ ಘರ್ಷಣೆಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ದೇಶದ ಸಮಗ್ರತೆಯ ಬಗ್ಗೆ ಮೋದಿ ಮಾತನಾಡಿರುವುದು ಮಹತ್ವ ಪಡೆದಿದೆ.

ಮೋದಿ ಟೀಕಿಸಿದ್ದ ಕೈ ಶಾಸಕ ಮೇವಾನಿ ಅಸ್ಸಾಂ ಪೊಲೀಸರಿಂದ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಾಕಾರಿ ಟ್ವೀಟ್‌ ಮಾಡಿದ್ದ ಪ್ರಕರಣ ಸಂಬಂಧ ಗುಜರಾತ್‌ ಕಾಂಗ್ರೆಸ್‌ ಶಾಸಕ ಜಿಗ್ನೇಶ್‌ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಬುಧವಾರ ಜಿಗ್ನೇಶ್‌ ಅವರನ್ನು ಗುಜರಾತ್‌ನಲ್ಲಿ ಬಂಧಿಸಿದ ಅಸ್ಸಾಂ ಪೊಲೀಸರು, ಗುರುವಾರ ಅವರನ್ನು ಅಸ್ಸಾಂಗೆ ಕರೆತಂದಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ಗೋಡ್ಸೆಯನ್ನು ದೇವರೆಂದು ಪರಿಗಣಿಸಿದ್ದಾರೆ’ ಎಂದು ಜಿಗ್ನೇಶ್‌ ಟ್ವೀಟ್‌ ಮಾಡಿದ್ದರು.

ಇದರ ವಿರುದ್ಧ ಅಸ್ಸಾಂನ ಕೋಕ್ರಜ್ಹಾರ್‌ನಾದ್ಯಂತ ಎಫ್‌ಐಆರ್‌ ದಾಖಲಾಗಿದ್ದವು. ಈ ಬೆನ್ನಲ್ಲೇ ಟ್ವೀಟರ್‌ ಸಹ ಈ ಪೋಸ್ಟನ್ನು ಡಿಲೀಟ್‌ ಮಾಡಿತ್ತು. ಜಿಗ್ನೇಶ್‌ ಮೇವಾನಿ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಬಂಧನವನ್ನು ‘ಅಸಾಂವಿಧಾನಿಕ’, ‘ಪ್ರಜಾಪ್ರಭುತ್ವ ವಿರೋಧಿ’ ಎಂದಿದ್ದಾರೆ.