ಜಮ್ಮು ಕಾಶ್ಮೀರದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಒಮರ್ ಅಬ್ದುಲ್ಲಾ
ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಸರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ನ್ಯಾಷನಲ್ ಕಾನ್ಸರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿಂಗ್, ಒಮರ್‌ಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದ ಬಳಿಕದ ಮೊದಲ ಸಿಎಂ ಆದ ಹಿರಿಮೆಗೆ ಒಮರ್ ಪಾತ್ರರಾಗಿದ್ದಾರೆ. ಈ ಹಿಂದೆ ಅವರು 2009-14ರ ಅವಧಿಯಲ್ಲೂ ಸಿಎಂ ಆಗಿದ್ದರು.
ಇಂಡಿಯಾ ಕೂಟ ಭಾಗಿ: ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಂಡಿಯಾ ಕೂಟದ ನಾಯಕರಾದ ರಾಹುಲ್, ಪ್ರಿಯಾಂಕಾ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್, ಡಿ. ರಾಜಾ, ಪ್ರಕಾಶ್ ಕಾರಟ್, ಸಂಜಯ್ ಸಿಂಗ್, ಕನಿಮೋಳಿ, ಸುಪ್ರಿಯಾ ಸುಳೆ ಭಾಗಿಯಾಗಿದ್ದರು.
ಜಮ್ಮುವಿನ ಸುರಿಂದರ್ ಡಿಸಿಎಂ: ಒಮರ್ ಜೊತೆಗೆ ಇತರೆ ಐವರು ಕೂಡಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಶೇಷವೆಂದರೆ ಬಿಜೆಪಿ ಪ್ರಾಬಲ್ಯದ ಜಮ್ಮು ಪ್ರಾಂತ್ಯದ ಸುರಿಂದರ್ ಚೌಧರಿ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಗಿದೆ.
ಸಂಪುಟಕ್ಕೆ ಕಾಂಗ್ರೆಸ್ ಸದ್ಯ ಸೇರ್ಪಡೆ ಇಲ್ಲ
ಶ್ರೀನಗರ: ಜಮ್ಮು-ಕಾಶ್ಮೀರದ ನೂತನ ಸರ್ಕಾರ ಸೇರ್ಪಡೆಯಿಂದ ದೂ ರಉಳಿಯಲು ಕಾಂಗ್ರೆಸ್ ನಿರ್ಧರಿಸಿದೆ. ನ್ಯಾಷನಲ್ ಕಾನ್ಸರೆನ್ಸ್ ಮತ್ತು ಕಾಂಗ್ರೆಸ್ ಜಂಟಿಯಾಗಿಯೇ ಚುನಾವಣೆ ಎದುರಿಸಿದ್ದವು. ಆದರೆ 370ನೇ ವಿಧಿ ಮರು ಜಾರಿ ಬಗ್ಗೆ ಕಾಂಗ್ರೆಸ್ ತನ್ನ ಬೆಂಬಲ ನೀಡಿರಲಿಲ್ಲ. ಹೀಗಾಗಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲಾಗುವುದು. ಸಚಿವ ಸಂಪುಟ ಸೇರುವುದಿಲ್ಲ ಎಂದು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಹಮೀದ್ ಕರ್ರಾ ಹೇಳಿದ್ದಾರೆ.
ಜೈಲಿನಲ್ಲಿದ್ದುಕೊಂಡೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕಾಶ್ಮೀರದ ಸಂಸದನಿಗೆ ಜಾಮೀನು