200 ವರ್ಷ ಪುರಾತನ OFB ವಿಸರ್ಜನೆ: ಸ್ವಾವಲಂಬಿ ಶಸ್ತ್ರಾಸ್ತ್ರ ಕ್ರಾಂತಿಗೆ ಮುನ್ನುಡಿ!
* 200 ವರ್ಷ ಪುರಾತನ ಒಎಫ್ಬಿ ವಿಸರ್ಜನೆ
* ಅರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ 7 ಕಂಪನಿಗಳಾಗಿ ಹೋಳು
* ಸ್ವಾವಲಂಬಿ ಶಸ್ತ್ರಾಸ್ತ್ರ ಕ್ರಾಂತಿಗೆ ಮುನ್ನುಡಿ
ನವದೆಹಲಿ(ಆ.16): 200 ವರ್ಷ ಹಳೆಯದಾದ ‘ಅರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್’(ಶಸ್ತ್ರಾಸ್ತ್ರ ಕಾರ್ಖಾನೆ ನಿಗಮ) ವಿಸರ್ಜಿಸಿ ಅದನ್ನೇ 7 ಸಾರ್ವಜನಿಕ ಸ್ವಾಮ್ಯದ ಕಾರ್ಪೋರೆಟ್ ಉದ್ದಿಮೆಗಳನ್ನಾಗಿ ಪರಿವರ್ತಿಸಲಾಗಿದೆ. ಈ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಚಾಲನೆ ನೀಡಿದ್ದಾರೆ. ಹೊಸ ಕಂಪನಿಗಳು, ಆಡಳಿತದಲ್ಲಿ ಪಾರದರ್ಶಕತೆ, ಉತ್ಪಾದನೆಯಲ್ಲಿ ಸ್ಪರ್ಧೆ, ಹೊಣೆಗಾರಿಕೆ ಮೂಲಕ ಹೊಸ ಯುಗದ ಬೇಡಿಕೆಗೆ ಅನುಗುಣವಾಗಿ ಬದಲಾಗಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತದ ರಕ್ಷಣಾ(Defence) ಕ್ಷೇತ್ರದ ಬೆನ್ನೆಲುಬಾಗಿದ್ದ ಅತ್ಯಂತ ಹಳೆಯ ರಕ್ಷಣಾ ಸಾಮಗ್ರಿ ಉತ್ಪಾದಕ ಸಂಸ್ಥೆಯ ಕುರಿತ ಒಂದಷ್ಟುಕುತೂಹಲಕಾರಿ ಮಾಹಿತಿ ಇಲ್ಲಿದೆ.
1712ರಲ್ಲಿ ಡಚ್ಚರಿಂದ ಆರಂಭ!
ಶಸ್ತ್ರಾಸ್ತ್ರ ಕಾರ್ಖಾನೆ ನಿಗಮ, ಭಾರತೀಯ ಸೇನೆ ಮತ್ತು ಭಾರತೀಯ ರೈಲ್ವೆಗಿಂತ ಒಂದು ಶತಮಾನಕ್ಕಿಂತಲೂ ಹಳೆಯದು. 1712ರಲ್ಲಿ ಡಚ್ ಒಸ್ಟೆಂಡ್ ಕಂಪನಿಯು ಗನ್ ಪೌಡರ್ ಕಾರ್ಖಾನೆಯನ್ನು ಸ್ಥಾಪಿಸಿದಾಗ ಇದರ ಉದಯವಾಯಿತು. 1787ರಲ್ಲಿ, ಇಚಾಪೋರ್‌ನಲ್ಲಿ ಮತ್ತೊಂದು ಗನ್‌ಪೌಡರ್ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಇದು 1791ರಲ್ಲಿ ಉತ್ಪಾದನೆಯನ್ನು ಆರಂಭಿಸಿತು. ಈ ಸ್ಥಳವನ್ನು ನಂತರ ರೈಫಲ… ಕಾರ್ಖಾನೆಯಾಗಿ ಬಳಸಲಾಯಿತು. 1801ರಲ್ಲಿ, ಗನ್ ಕ್ಯಾರೇಜ್ ಏಜೆನ್ಸಿ (ಈಗ ಗನ್ ಶೆಲ… ಫ್ಯಾಕ್ಟರಿ, ಕಾಸಿಪೋರ್ ಎಂದು ಕರೆಯಲ್ಪಡುತ್ತದೆ) ಕೋಲ್ಕತ್ತದ ಕೊಸಿಪೋರ್‌ನಲ್ಲಿ ಸ್ಥಾಪಿಸಲಾಯಿತು. ಇದು 1802ರಲ್ಲಿ ಉತ್ಪಾದನೆಯನ್ನು ಆರಂಭಿಸಿತು. ಈಗಲೂ ಇದು ಭಾರತದ ಅತ್ಯಂತ ಹಳೆಯ ಶಸ್ತ್ರಾಸ್ತ್ರ ಕಾರ್ಖಾನೆ. ಮುಂದೇ ಇದೇ ಅರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ ಅಥವಾ ಶಸ್ತಾ್ರಸ್ತ್ರ ಕಾರ್ಖಾನೆ ಮಂಡಳಿಯಾಯಿತು.
ಒಎಫ್ಬಿ ಕೆಲಸ ಏನು?
ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ‍್ಯ ನಿರ್ವಹಿಸುವ ಸಂಸ್ಥೆ. ಇದರ ಪ್ರಧಾನ ಕಚೇರಿ ಕೋಲ್ಕತ್ತದಲ್ಲಿದೆ. ಇದು ಸಂಶೋಧನೆ, ಅಭಿವೃದ್ಧಿ, ಉತ್ಪಾದನೆ, ಪರೀಕ್ಷೆ, ಮಾರ್ಕೆಟಿಂಗ್ ಮತ್ತು ವಾಯು, ಭೂಮಿ ಮತ್ತು ಸಮುದ್ರ ವ್ಯವಸ್ಥೆಗಳ ಸೇನಾ ಸಾಮಗ್ರಿಗಳನ್ನು ತಯಾರಿಸುತ್ತದೆ. ಈ ಮೊದಲು ಇದು 41 ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಹೊಂದಿತ್ತು. ಸದ್ಯ ಅವುಗಳ ವಿಸರ್ಜನೆ ಬಳಿಕ 7 ಹೊಸ ರಕ್ಷಣಾ ಕಂಪನಿಗಳು, ಒಂಬತ್ತು ತರಬೇತಿ ಸಂಸ್ಥೆಗಳು, ಮೂರು ಪ್ರಾದೇಶಿಕ ಮಾರುಕಟ್ಟೆಕೇಂದ್ರಗಳು ಮತ್ತು ನಾಲ್ಕು ಪ್ರಾದೇಶಿಕ ನಿಯಂತ್ರಣ ಕೇಂದ್ರಗಳನ್ನು ಒಳಗೊಂಡಿದೆ. ಇವುಗಳು ದೇಶದಾದ್ಯಂತ ಹರಡಿವೆ. ಪ್ರತಿ ವರ್ಷ, 18 ಮಾಚ್‌ರ್ ಅನ್ನು ಭಾರತದಲ್ಲಿ ಆರ್ಡಿನನ್ಸ್ ಫ್ಯಾಕ್ಟರಿ ದಿನವಾಗಿ ಆಚರಿಸಲಾಗುತ್ತದೆ.
ಏಷ್ಯಾದ 2ನೇ ಅತಿ ದೊಡ್ಡ ರಕ್ಷಣಾ ಸಾಮಗ್ರಿ ತಯಾರಕ
ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ಜಗತ್ತಿನ 37ನೇ ಅತಿ ದೊಡ್ಡ ರಕ್ಷಣಾ ಸಾಮಗ್ರಿ ಉತ್ಪಾದಕ ಸಂಸ್ಥೆ. ಏಷ್ಯಾದ 2ನೇ ಅತಿ ದೊಡ್ಡ ಮತ್ತು ಭಾರತದ ಅತಿ ದೊಡ್ಡ ಹಾಗೂ ಪುರಾತನ ರಕ್ಷಣಾ ಸಾಮಗ್ರಿ ಉತ್ಪಾದಕ ಎಂಬ ಹಿರಿಮೆ ಹೊಂದಿದೆ. ಅಷ್ಟೇ ಅಲ್ಲದೆ, ಸರ್ಕಾರಿ ನಿಯಂತ್ರಣದಲ್ಲಿರುವ ಜಗತ್ತಿನ ಅತಿ ದೊಡ್ಡ ಸಂಸ್ಥೆಯೂ ಹೌದು. ಇದರಡಿಯಲ್ಲಿ ಬರೋಬ್ಬರಿ 75,000 ಮಂದಿ ಉದ್ಯೋಗ ಮಾಡುತ್ತಿದ್ದು, ಭಾರತ ಸೇನೆಯ ನಾಲ್ಕನೇ ಅಂಗ ಎಂದೇ ಕರೆಯಲಾಗುತ್ತಿತ್ತು.
ಕೈಗಾರಿಕಾ ಕ್ರಾಂತಿಗೆ ಮುನ್ನುಡಿ
ಆರ್ಡಿನನ್ಸ್ ಫ್ಯಾಕ್ಟರಿ ಭಾರತದ ಯುದ್ಧಗಳಿಗೆ ಕೊಡುಗೆ ನೀಡಿದ್ದು ಮಾತ್ರವಲ್ಲದೆ, ಭಾರತದ ಕೈಗಾರಿಕಾ ಕ್ರಾಂತಿ, ಅತ್ಯಾಧುನಿಕ ತಂತ್ರಜ್ಞಾನದ ಆಗಮನಕ್ಕೂ ಮಹತ್ತರ ಕೊಡುಗೆ ನೀಡಿದೆ. ಮೊಟ್ಟಮೊದಲ ಆಧುನಿಕ ಉಕ್ಕು ಸ್ಥಾವರ, ಮೊದಲ ಆಧುನಿಕ ಜವಳಿ ಗಿರಣಿ, ಮೊದಲ ರಾಸಾಯನಿಕ ಕೈಗಾರಿಕೆಗಳು, ಪ್ರಪ್ರಥಮ ಇಂಜಿನಿಯರಿಂಗ್ ಕಾಲೇಜುಗಳು, ತರಬೇತಿ ಶಾಲೆಗಳ ಆರಂಭಕ್ಕೆ ಮುನ್ನುಡಿ ಬರೆದಿತ್ತು. ಅಲ್ಲದೆ ಇಸ್ರೋ, ಡಿಆರ್ಡಿಒ, ಬಿಇಎಲ್,ಬಿಇಎಂಎಲ್ ಇತ್ಯಾದಿ ಸಂಶೋಧನಾ ಸಂಸ್ಥೆಗಳ ಸ್ಥಾಪನೆಗೂ ಪ್ರಮುಖ ಕಾರಣವಾಗಿತ್ತು.
41 ಶಸ್ತ್ರಾಸ್ತ್ರ ಕಾರ್ಖಾನೆ ವಿಸರ್ಜಿಸಿ 7 ಹೊಸ ರಕ್ಷಣಾ ಕಾರ್ಖಾನೆ ಸ್ಥಾಪನೆ
ರಕ್ಷಣಾ ಸಚಿವಾಲಯ 17 ಜೂನ್ 2021ರಂದು 200 ವರ್ಷ ಹಳೆಯದಾದ ಶಸ್ತಾ್ರಸ್ತ್ರ ಕಾರ್ಖಾನೆ ಮಂಡಳಿಯನ್ನು ಸರ್ಕಾರದ ಒಡೆತನದ ಏಳು ಕಂಪನಿಗಳಾಗಿ ವಿಸರ್ಜಿಸುವ ಯೋಜನೆಯನ್ನು ಘೋಷಿಸಿತು. ಅಸ್ತಿತ್ವದಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಉದ್ಯೋಗಿಗಳು ಈ ಏಳು ಪಿಎಸ್‌ಯುಗಳ ಭಾಗವಾಗುತ್ತಾರೆ ಎಂದು ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿದೆ. ಅಕ್ಟೋಬರ್ 15ರಿಂದ ಇವುಗಳ ಎಲ್ಲಾ ನಿರ್ವಹಣೆ, ನಿಯಂತ್ರಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಹೊಸದಾಗಿ ರೂಪುಗೊಂಡ ಕಂಪನಿಗಳಿಗೆ ವರ್ಗಾಯಿಸಲಾಗುತ್ತಿದೆ. ಆ 7 ನೂತನ ಕಂಪನಿಗಳೆಂದರೆ
1. ಆರ್ಮರ್ಡ್ ವೆಹಿಕಲ್ ನಿಗಮ್ ಲಿ: ಈ ಕಂಪನಿ ವಿಶ್ವ ಗುಣಮಟ್ಟದ ಮೂಲ ಸೌಕರ್ಯಗಳನ್ನು 12 ಸಾವಿರ ಕೌಶಲ್ಯಭರಿತ ಕಾರ್ಮಿಕರಿಂದ ನಿರ್ಮಾಣ ಮಾಡುತ್ತದೆ. ಬೃಹತ್ ವಾಹನಗಳು, ಇಂಜಿನ್ ತಯಾರಿಕೆ, ಯುದ್ಧೋಪಕರಣಗಳು, ಮಷೀನ್ ಉಪಕರಣಗಳ ತಯಾರಿಕಾ ಕಾರ್ಖಾನೆಗಳನ್ನು ಇದು ಒಳಗೊಳ್ಳಲಿದೆ.
2. ಅಡ್ವಾನ್ಸ್ ವೆಪನ್ ಅಂಡ್ ಇಕ್ವಿಪ್‌ಮೆಂಟ್ ಇಂಡಿಯಾ ಲಿ: ಚಿಕ್ಕ ಆಯುಧಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಈ ಕಂಪೆನಿಯನ್ನು ಖಾನ್‌ಪುರ್‌ನಲ್ಲಿ ಸ್ಥಾಪಿಸಲಾಗಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಶಸ್ತ್ರಾಸ್ತ್ರಗಳ ತಯಾರಿಕೆಗೆ ಈಗಾಗಲೇ 4.066 ಕೋಟಿ ರು. ಮೌಲ್ಯದ ಆರ್ಡರ್ ಅನ್ನು ಈ ಕಂಪನಿ ಪಡೆದುಕೊಂಡಿದೆ.
3. ಗ್ಲಿಡರ್ಸ್ ಇಂಡಿಯಾ ಲಿ. : ಈ ಸಂಸ್ಥೆಯು ಸೇನೆಗೆ ಬೇಕಾದ ವಸ್ತ್ರಗಳನ್ನು ತಯಾರಿಸುತ್ತದೆ. ಖಾನ್‌ಪುರ್‌ನಲ್ಲಿ ಇದನ್ನು ಸ್ಥಾಪಿಸಲಾಗಿದೆ.
4. ಮ್ಯುನೀಷನ್ ಇಂಡಿಯಾ ಲಿ. : ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾಪಿಸಲಾಗಿರುವ ಈ ಸಂಸ್ಥೆ ಸಾಮಾನ್ಯ ಉದ್ದೇಶಗಳಿಗೆ ಅವಶ್ಯವಿರುವ ಯಂತ್ರೋಪಕರಣಗಳನ್ನು ತಯಾರು ಮಾಡುತ್ತದೆ. ಸೈನ್ಯಕ್ಕೆ ಅಗತ್ಯವಿರುವ ಪ್ಯಾರಾಚೂಟ್‌ಗಳನ್ನು ತಯಾರಿಸುತ್ತಿದೆ.
5. ಯಂತ್ರ ಇಂಡಿಯಾ ಲಿ. : ನಾಗಪುರದಲ್ಲಿ ಸ್ಥಾಪಿಸಲಾಗಿರುವ ಈ ಕಂಪನಿ ಸ್ಫೋಟಕಗಳಿಗೆ ಅಗತ್ಯವಾಗಿರುವ ಘಟಕಗಳನ್ನು ತಯಾರಿಸುತ್ತದೆ.
6. ಇಂಡಿಯಾ ಆಪ್ಟಲ್ ಲಿ. : ಉತ್ತರಖಂಡ್‌ನ ಡೆಹರಾಡೂನ್‌ನಲ್ಲಿ ಕಾರ್ಯನಿರ್ವಹಿಸುವ ಈ ಕಂಪನಿ ವಿದ್ಯುನ್ಮಾನ ಯಂತ್ರಗಳು ಮತ್ತು ಸಲಕರಣೆಗಳನ್ನು ತಯಾರಿಸುತ್ತದೆ.
7. ಟ್ರೂಫ್ಸ್ ಕಂಫಟ್ಸ್‌ರ್ ಲಿ. : ಖಾನ್‌ಪುರ್‌ನಲ್ಲಿ ಸ್ಥಾಪಿಸಲಾಗಿರುವ ಈ ಕಂಪೆನಿ ಉಡುಗೆ ತೊಡುಗೆಗಳನ್ನು ತಯಾರಿಸುತ್ತದೆ.
ಟೈಮ್‌ಲೈನ್
1712- ಇಚಾಪುರದಲ್ಲಿ ಡಚ್ ಓಸ್ಟೆಂಡ್ ಕಂಪನಿಯ ಗನ್ ಪೌಡರ್ ಕಾರ್ಖಾನೆಯ ಸ್ಥಾಪನೆ.
1775- ಕೋಲ್ಕತ್ತದ ಫೋರ್ಟ್ ವಿಲಿಯಂನಲ್ಲಿ ಆರ್ಡಿನನ್ಸ್ ಮಂಡಳಿಯ ಸ್ಥಾಪನೆ.
1787- ಇಶಾಪುರದಲ್ಲಿ ಗನ್ ಪೌಡರ್ ಕಾರ್ಖಾನೆಯ ಸ್ಥಾಪನೆ.
1791- ಇಶಾಪುರದಲ್ಲಿ ಗನ್ ಪೌಡರ್ ಉತ್ಪಾದನೆ ಆರಂಭ.
1801- ಕೋಸಿಪೋರ್, ಕೋಲ್ಕತ್ತದಲ್ಲಿ ಗನ್ ಕ್ಯಾರೇಜ್ ಏಜೆನ್ಸಿಯ ಸ್ಥಾಪನೆ.
1802- ಮಾಚ್‌ರ್ 18ರಂದು ಕಾಸಿಪೋರ್‌ನಲ್ಲಿ ಉತ್ಪಾದನೆ ಆರಂಭ.
1935- ಭಾರತದ ಸಂಪೂರ್ಣ ರಕ್ಷಣಾ ಉತ್ಪಾದನಾ ಉದ್ಯಮವನ್ನು ನಿರ್ವಹಿಸಲು ಭಾರತೀಯ ಶಸ್ತ್ರಾಸ್ತ್ರ ಸೇವೆಯನ್ನು ಆರಂಭ.
1954 - ಭಾರತೀಯ ಶಸ್ತ್ರಾಸ್ತ್ರ ಸೇವೆ (ಐಒಎಸ್) ಅನ್ನು ಭಾರತೀಯ ಆರ್ಡಿನನ್ಸ್ ಫ್ಯಾಕ್ಟರಿ ಸೇವೆ (ಐಒಎಪ್‌ಎಸ್) ಎಂದು ಮರುನಾಮಕರಣ ಮಾಡಲಾಯಿತು .
1979 - ಶಸ್ತ್ರಾಸ್ತ್ರ ಕಾರ್ಖಾನೆ ನಿಗಮವನ್ನು ಏಪ್ರಿಲ… 2ರಂದು ಸ್ಥಾಪಿಸಲಾಯಿತು.