ಒಡಿಶಾ ತ್ರಿವಳಿ ರೈಲು ದುರಂತ: ಯುದ್ಧಭೂಮಿಯಂತಾದ ಬಾಲಸೋರ್ ಜಿಲ್ಲಾಸ್ಪತ್ರೆ
ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತವು ಅಲ್ಲಿನ ವೈದ್ಯಕೀಯ ಸಮುದಾಯವನ್ನು ದಂಗು ಬಡಿಸಿtತ್ತು. ಅಪಘಾತದ ಬಳಿಕ ಒಮ್ಮಿಂದೊಮ್ಮೆಲೆ 500ಕ್ಕೂ ಅಧಿಕ ಗಾಯಾಗಳುಗಳನ್ನು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು.ಬಂದ ಎಲ್ಲ ಗಾಯಾಳುಗಳಿಗೂ ಉಪಚರಿಸಿ ವೈದ್ಯಕೀಯ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ಬಾಲಸೋರ್: ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ತ್ರಿವಳಿ ರೈಲು ಅಪಘಾತವು ಅಲ್ಲಿನ ವೈದ್ಯಕೀಯ ಸಮುದಾಯವನ್ನು ದಂಗು ಬಡಿಸಿದೆ. ಅಪಘಾತದ ಬಳಿಕ ಒಮ್ಮಿಂದೊಮ್ಮೆಲೆ 500ಕ್ಕೂ ಅಧಿಕ ಗಾಯಾಗಳುಗಳನ್ನು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ಕರೆತಂದ ಕಾರಣ ವೈದ್ಯರು ಅವಾಕ್ಕಾಗಿದ್ದಾರೆ. ಆದರೂ ಅವರು ಕೆಲ ಕ್ಷಣಗಳ ಬಳಿಕ ಸಾವರಿಸಿಕೊಂಡು ಬಂದ ಎಲ್ಲ ಗಾಯಾಳುಗಳಿಗೂ ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಬಗ್ಗೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡ ಬಾಲಸೋರ್ (Balasore) ಜಿಲ್ಲಾ ಆಸ್ಪತ್ರೆಯ ಹೆಚ್ಚುವರಿ ಮುಖ್ಯ ವೈದ್ಯಾಧಿಕಾರಿ ಡಾ. ಮೃತ್ಯುಂಜಯ ಮಿಶ್ರಾ, 'ನಾನು ಅನೇಕ ದಶಕಗಳಿಂದ ವೈದ್ಯ ವೃತ್ತಿಯಲ್ಲಿದ್ದೇನೆ. ಆದರೆ ಯಾವತ್ತೂ ಆಸ್ಪತ್ರೆಗಳಲ್ಲಿ ಇಷ್ಟೊಂದು ಕೋಲಾಹಲದ ಪರಿಸ್ಥಿತಿ ನೋಡಿರಲಿಲ್ಲ. ಏಕಾಏಕಿ ನಮ್ಮ ಆಸ್ಪತ್ರೆಗೆ 251 ಗಾಯಾಳುಗಳು ಶುಕ್ರವಾರ ರಾತ್ರಿ 8.30ರ ಸುಮಾರಿಗೆ ದೌಡಾಯಿಸಿದರು. ಆಸ್ಪತ್ರೆ ಒಂದು ರೀತಿ ಯುದ್ಧಭೂಮಿಯಂತೆ ಗೋಚರಿಸಿತು. ನಮ್ಮಲ್ಲಿ ಇಷ್ಟೊಂದು ಗಾಯಾಳುಗಳಿಗೆ ಉಪಚರಿಸುವ ವ್ಯವಸ್ಥೆಯೇ ಇರಲಿಲ್ಲ. ಕೂಡಲೇ ಮನೆಗೆ ಹೋಗಿದ್ದ ವೈದ್ಯ ಸಿಬ್ಬಂದಿಗೂ ಬುಲಾವ್ ನೀಡಿದೆವು. ಅವರು ಕೂಡಲೇ ಆಸ್ಪತ್ರೆಗೆ ದೌಡಾಯಿಸಿದರು. ಕೊನೆಗೆ ಬಂದ ಎಲ್ಲ ಗಾಯಾಳುಗಳನ್ನು ಉಪಚರಿಸುವಲ್ಲಿ ಯಶಸ್ವಿಯಾದೆವು. 251 ಗಾಯಾಳುಗಳ ಪೈಕಿ 60 ಮಂದಿ ಮಾತ್ರ ಗಂಭೀರ ಗಾಯಗಳ ಕಾರಣ ಆಸ್ಪತ್ರೆಗೆ ದಾಖಲಾದರು. ಉಳಿದವರಿಗೆ ಹೊರರೋಗಿ ವಿಭಾಗದಲ್ಲಿ ಡ್ರೆಸ್ಸಿಂಗ್ ಮಾಡಿ ಕಳಿಸಿದೆವು ಎಂದು ಹೇಳಿದರು.
ರೈಲು ಹಳಿ ಮೇಲೆ ಟೈರ್ ಇಟ್ಟ ಕಿಡಿಗೇಡಿಗಳು: ತಮಿಳುನಾಡಲ್ಲಿ ತಪ್ಪಿದ ಭೀಕರ ರೈಲು ದುರಂತ
ಇದೇ ವೇಳೆ, ಅನೇಕರು ಬಂಗಾಳದ ಪ್ರಯಾಣಿಕರಾಗಿದ್ದರು. ಅವರಿಗೆ ಒಡಿಯಾ (Odia)ಭಾಷೆ ಗೊತ್ತಿರಲಿಲ್ಲ. ಹೀಗಾಗಿ ಸಂವಹನ ಸಮಸ್ಯೆಯೂ ಆಯಿತು. ಆದರೂ ನಾವು ಪರಿಸ್ಥಿತಿ ನಿಭಾಯಿಸಿದೆವು ಎಂದರು. ಇದೊಂದು ಜೀವನದಲ್ಲೇ ಕಂಡು ಕೇಳರಿಯದ ಅನುಭವ. ನಮ್ಮಲ್ಲಿ ಅಷ್ಟೊಂದು ವ್ಯವಸ್ಥೆ ಇಲ್ಲದಿದ್ದರೂ ಶಕ್ತಿ ಮೀರಿ ರೋಗಿಗಳನ್ನು ಉಪಚರಿಸಿದೆವು. ಈಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿಂದ ಊರಿಗೆ ತೆರಳುತ್ತಿದ್ದ ಹೋಟೆಲ್ ಉದ್ಯೋಗಿ ಸಾವು
ಜಲ್‌ಪೈಗುರಿ: ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಬೆಂಗಳೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೂಡ ಸಾವಿಗೀಡಾಗಿದ್ದಾನೆ. ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯ ಸಾಗರ್ ಖೇರಿಯಾ (30)ಗೆ ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತ್ತು. ಮೊದಲ ಬಾರಿಗೆ ಬೆಂಗಳೂರಿಂದ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಊರಿಗೆ ಹೊರಟಿದ್ದ. ಶುಕ್ರವಾರ ಸಂಜೆ 6.45ರ ವೇಳೆಗೆ ಪೋಷಕರ ಜತೆ ರೈಲಿನಲ್ಲಿದ್ದಾಗಲೇ ಫೋನ್‌ನಲ್ಲಿ ಮಾತನಾಡಿದ್ದ. ಅದಾದ ಕೆಲವೇ ನಿಮಿಷಗಳಲ್ಲಿ ಅಪಘಾತದಲ್ಲಿ ಬಲಿಯಾಗಿದ್ದಾನೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ
ಖೇರಿಯಾ ಸೇರಿದಂತೆ 14 ಮಂದಿ ಜಲ್‌ಪೈಗುರಿಯಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗಿದ್ದರು. ಅವರೆಲ್ಲರೂ ಬೆಂಗಳೂರು- ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಊರಿಗೆ ಮರಳುತ್ತಿದ್ದರು. ಇದೀಗ ಖೇರಿಯಾ ಸಾವಿಗೀಡಾಗಿದ್ದಾನೆ. ಇಬ್ಬರು ಗಾಯಗೊಂಡಿದ್ದಾರೆ. ಉಳಿದ 11 ಮಂದಿಯ ವಿವರವೇ ಗೊತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನ ಚಾಲಕರು, ಗಾರ್ಡ್‌ಗಳು ಬಚಾವ್!
ಕೋಲ್ಕತಾ: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಮೂರೂ ರೈಲಿನ ಲೋಕೋಪೈಲಟ್‌ಗಳು (ಚಾಲಕರು), ಗಾರ್ಡ್‌ಗಳು ಪವಾಡ ಸದೃಶ್ಯ ರೀತಿಯಲ್ಲಿ ಜೀವ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಚಾಲಕ, ಸಹಚಾಲಕ ಮತ್ತು ಗಾರ್ಡ್ ಗಾಯಗೊಂಡಿದ್ದಾರೆ. ಅದೇ ರೀತಿ ಬೆಂಗಳೂರು- ಹೌರಾ ಎಕ್ಸ್‌ಪ್ರೆಸ್ ರೈಲಿನ ಚಾಲಕ, ಸಹಚಾಲಕ, ಗಾರ್ಡ್ ಕೂಡಾ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ ಗೂಡ್ಸ್ ರೈಲಿನ ಚಾಲಕರು ಹಾಗೂ ಗಾರ್ಡ್ ಅಪಾಯದಿಂದ ಪಾರಾಗಿದ್ದಾರೆ.
ನವದೆಹಲಿ: ಒಡಿಶಾ ರೈಲು ಅಪಘಾತದ ಹಿನ್ನೆಲೆಯಲ್ಲಿ ಆ ಮಾರ್ಗದ ಮೂಲಕ ಸಂಚರಿಸಬೇಕಿದ್ದ ಒಟ್ಟು ದಕ್ಷಿಣ ಮತ್ತು ಈಶಾನ್ಯ ವಲಯದ 90 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 46 ರೈಲುಗಳ ಮಾರ್ಗ ಬದಲಿಸಲಾಗಿದೆ. 11 ರೈಲುಗಳ ಸಂಚಾರ ಮಾರ್ಗ ಕಡಿತಗೊಳಿಸಲಾಗಿದೆ. ಈ ಮಾರ್ಗದಲ್ಲಿ ಸುಗಮ ಸಂಚಾರ ಪುನಾರಂಭಕ್ಕೆ ಕೆಲ ದಿನ ಬೇಕಾಗಲಿದೆ ಎನ್ನಲಾಗಿದೆ.