ಭುವನೇಶ್ವರ(ಏ.09): ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಗಮನಾರ್ಹ ಹೆಜ್ಜೆಗಳನ್ನಿರಿಸುತ್ತಿದೆ. ಕೊರೋನಾ ಸೋಂಕಿತರಿಗಾಗೇ ಮೂರು ಆಸ್ಪತ್ರೆಗಳನ್ನು ತೆರೆದಿದ್ದ ಒಡಿಶಾ, ಬಳಿಕ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ವೈದ್ಯರ ಸೇನೆ ರೆಡಿ ಮಾಡಿತ್ತು. ಇದೀಗ ಏಪ್ರಿಲ್‌ 30ರವರೆಗೆ ಲಾಕ್‌ಡೌನ್ ವಿಸ್ತರಿಸಿ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ.

ಮೊದಲು 3 ಆಸ್ಪತ್ರೆ, ಈಗ ವೈದ್ಯರ ಸೇನೆ: ಕೊರೋನಾ ಸಮರದಲ್ಲಿ ಚೀನಾ ಹಿಂದಿಕ್ಕಿದೆ ಈ ರಾಜ್ಯ!

ಈ ಸಂಬಂಧ ಪ್ರತಿಕ್ರಿಯಿಸಿರುವ ಒಡಿಶಾ ಸಿಎಂ ನವೀನ್ ಪಟ್ನಾಯಕ್ 'ಇಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಜೀವ ಕಾಪಾಡುವುದು ಮುಖ್ಯವೋ ಅಥವಾ ಆರ್ಥಿಕ ಪರಿಸ್ಥಿತಿ ಸರಿಸೂಗಿಸುವುದು ಮುಖ್ಯವೋ ಎಂಬುವುದನ್ನು ನಿರ್ಧರಿಸಬೇಕಾಗುತ್ತದೆ. ಹೀಗಿರುವಾಗ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಜನರ ಪ್ರಾಣ ಉಳಿಸುವುದೇ ಮೊದಲ ಆದ್ಯತೆ ಎಂಬ ಅಭಿಪ್ರಾಯವನ್ನು ಸಚಿವರೆಲ್ಲರೂ ವ್ಯಕ್ತಪಡಿಸಿದ್ದಾರೆ'  ಎಂದಿದ್ದಾರೆ. ಅಲ್ಲದೇ ಈ ನಿಟ್ಟಿನಲ್ಲಿ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಏಪ್ರಿಲ್ 30ರವರೆಗೆ ವಿಸ್ತರಿಸಲಾಗಿದ್ದು, ಜೂನ್ 17ರವರೆಗೆ ಮುಚ್ಚಲಿವೆ ಎಂದೂ ತಿಳಿಸಿದ್ದಾರೆ.

ಇನ್ನು ಒಡಿಶಾದಲ್ಲಿ ಇಂದು ಗುರುವಾರ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ತೆಗೆದುಕೊಂಡ ಇತರ ನಿರ್ಧಾರಗಳ ಕುರಿತಾಗಿಯೂ ಮಾಹಿತಿ ನೀಡಿದ ಸಿಎಂ ಪಟ್ನಾಯಕ್, ದೇಶಾದ್ಯಂತ ಲಾಕ್‌ಡೌನ್ ಇನ್ನೂ 21 ದಿನ ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ. ಅಲ್ಲದೇ ದೇಶದಲ್ಲಿ ರೈಲು ಹಾಗೂ ವಿಮಾನ ಯಾನ ಸೇವೆಯನ್ನೂ ಈ ತಿಂಗಳ ಅಂತ್ಯದವರೆಗೆ ಪುನರಾರರಂಭಿಸಬಾರದು. ಇನ್ನು ಕೃಷಿ ಚಟುವಟಿಕೆ, ಪಶು ಸಂಗೋಪನೆ ಹಾಗೂ ಗ್ರಾಮೀಣಉದ್ಯೋಗ ಖಾತರಿ ಯೋಜನೆಗಳನ್ನು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮುಂದುವರೆಸಬೇಕೆಂದು ಹೇಳಿದ್ದಾರೆ.

ಹೇಗಿದೆ ಒಡಿಶಾ ಪರಿಸ್ಥಿತಿ?

ಒಡಿಶಾದಲ್ಲಿ ಕೊರೋನಾ ತಡೆಗಟ್ಟುವ ಸಲುವಾಗಿ ವಿಶೇಷ ಕಾಳಜಿ ವಹಿಸಿದ್ದು, ಈವರೆಗೆ ಇಲ್ಲಿ 42ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಮಾರ್ಚ್ 15 ರಂದು ಇಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು.