ಭುವೇಶ್ವರ(ಜೂ.13): ಒಡಿಶಾದ ನಯಾಗಢದ  ಪದ್ಮಾವತಿ ನದಿ ಆಸು ಪಾಸಿನ ಜನರೆಲ್ಲಾ, ಇದ್ದಕ್ಕಿದ್ದಂತೆ ಐನೂರು ವರ್ಷ ಹಳೆಯ ವಿಷ್ಣು ದೇಗುಲವೊಂದು ಇದ್ದಕ್ಕಿದ್ದಂತೆ ನೀರಿನೊಳಗೆ ಪ್ರತ್ಯಕ್ಷವಾದುದನ್ನು ಕಂಡು ಅಚ್ಚರಿಗೀಡಾಗಿದ್ದಾರೆ. ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್  ಆಂಡ್ ಕಲ್ಚರಲ್ ಹೆರಿಟೇಜ್‌ನ ಪುರಾತತ್ವ ಅಧಿಕಾರಿಗಳ ತಂಡ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಈ ಮಂದಿರವನ್ನು ತಾವೇ ಶೋಧ ಮಾಡಿದ್ದೇವೆ. ಈ ಮಂದಿರ ನೋಡಿದ ಬಳಿಕ ಇದು 15 ಅಥವಾ 16ನೇ ಶತಮಾನದ್ದಾಗಿರಬಹುದೆಂದು ಅಂದಾಜಿಸಲಾಗಿದೆ. ಈ ಮಂದಿರದಲ್ಲಿ ಗೋಪಿನಾಥ್ ಪ್ರತಿಮೆ ಇತ್ತು. ಇದನ್ನು ಸದ್ಯ ಹಳ್ಳಿಯ ಜನ ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.

1600 ವರ್ಷ ಹಿಂದೆ ರಾತ್ರೋ ರಾತ್ರಿ ಮರೆಯಾಗಿದ್ದ ಚರ್ಚ್ ಲಾಕ್‌ಡೌನ್ ನಡುವೆ ಪ್ರತ್ಯಕ್ಷ!

INTACH ತಂಡ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡುತ್ತಾ, ಒಡಿಶಾದ ನಯಾಗಢದಲ್ಲಿರುವ ಬೌಧ್ದೇಶ್ವರದ ಬಳಿ ಮಹಾನದಿಯ ಉಪನದಿಯಾಗಿರುವ ಪದ್ಮಾವತಿ ನದಿ ನಡುವೆ ಈ ದೇಗುಲದ ಮುಕುಟ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದಿದ್ದಾರೆ.

ಇನ್ನು ಪುರಾತತ್ವ ಅಧಿಕಾರಿ ದೀಪಕ್ ಕುಮಾರ್‌  ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವ ಪ್ರದೇಶದಲ್ಲಿ ಪದ್ಮಾವತಿ ನದಿ ಈಗ ಇದೆಯೋ ಅಲ್ಲಿ ಹಿಂದೆ ಒಂದ ಹಳ್ಳಿ ಹಾಗೂ ಹಲವಾರು ದೇಗುಲಗಳಿದ್ದವು ಎಂಬ ಮಾಹಿತಿ ನಮ್ಮ ತಂಡಕ್ಕೆ ಸಿಕ್ಕಿತ್ತು. ಇನ್ನು ನದಿಯಲ್ಲಿ ಯಾವ ಮಂದಿರದ ಮುಕುಟ ಕಾಣುತ್ತಿದೆಯೋ ಅದು ಸುಮಾರು ಅರವತ್ತು ಅಡಿ ಎತ್ತರವಿದೆ ಎಂದಿದ್ದಾರೆ.

ಇನ್ನು ಈ ದೇಗುಲ ಪತ್ತೆಯಾದ ಪ್ರದೇಶವನ್ನು ಸತ್ಪತಾನಾ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ. ಇಲ್ಲಿ ಒಟ್ಟು ಏಳು ಹಳ್ಳಿಗಳಿದ್ದು, ಇಲ್ಲಿನ ಜನರೆಲ್ಲಾ ಈ ದೇಗುಲದಲ್ಲಿ ವಿಷ್ಣುವನ್ನು ಆರಧಿಸುತ್ತಿದ್ದರೆನ್ನಲಾಗಿದೆ. ಆದರೆ 150 ವರ್ಷಗಳ ಹಿಂದೆ ನದಿಯ ಸ್ವರೂಪ ಬದಲಾಯ್ತು, ಭೀಕರ ಪ್ರವಾಹದಿಂದ ಹಳ್ಳಿಗಳು ಮುಳುಗಿದವು. ಇನ್ನು ನೀರಿನ ರಭಸ ಕಂಡು ಜನರು ದೇಗುಲದಲ್ಲಿದ್ದ ದೇವರ ಪ್ರತಿಮೆಯನ್ನು ತೆಗೆದುಕೊಂಡು ಎತ್ತರದ ಪ್ರದೇಶಕ್ಕೆ ತೆರಳಿದ್ದರೆನ್ನಲಾಗಿದೆ.