* ಹಿಂಸಾತ್ಮಕ ಕೃತ್ಯದಲ್ಲಿ ಪಾಲ್ಗೊಳ್ಳದಂತೆ ತಡೆಯಲು ಫತ್ವಾ ಜಾರಿ* ಇಸ್ಲಾಂ ಹೇಳಿದಂತೆ ನೂಪುರ್‌ಳನ್ನು ಕ್ಷಮಿಸಿ: ಜಮಾತ್‌ ಮನವಿ* ಹಿಂಸೆಗೆ ಕುಮ್ಮಕ್ಕು ನೀಡಿದವರ ವಿರುದ್ಧ ತನಿಖೆಗೆ ಆಗ್ರಹ

ನವದೆಹಲಿ(ಜೂ.14): ಪ್ರವಾದಿ ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರನ್ನು ಇಸ್ಲಾಂ ಧರ್ಮದ ಅನುಗುಣವಾಗಿ ಕ್ಷಮಿಸಬೇಕು ಎಂದು ಜಮಾತ್‌ ಉಲಮಾ-ಇ- ಹಿಂದ್‌ ಮುಖ್ಯಸ್ಥ ಸುಹೈಬ್‌ ಖಾಸ್ಮಿ ಹೇಳಿದ್ದಾರೆ.

ನೂಪುರ್‌ ಹೇಳಿಕೆ ವಿರೋಧಿಸಿ ದೇಶಾದ್ಯಂತ ಭಾರೀ ಪ್ರತಿಭಟನೆ, ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಜಮಾತ್‌ ಉಲಮಾ-ಇ- ಹಿಂದ್‌ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದು, ‘ಇಸ್ಲಾಂ ಪ್ರಕಾರ ನೂಪುರ್‌ ಶರ್ಮಾ ಅವರನ್ನು ಕ್ಷಮಿಸಬೇಕು. ಶುಕ್ರವಾರ ನಮಾಜ್‌ ಬಳಿಕ ದೇಶಾದ್ಯಂತ ಆರಂಬವಾದ ಹಿಂಸಾಚಾರವನ್ನು ನಾವು ವಿರೋಧಿಸುತ್ತೇವೆ’ ಎಂದು ಖಾಸ್ಮಿ ಹೇಳಿದ್ದಾರೆ.

ಬಿಜೆಪಿ ನೂಪುರ್‌ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದ್ದು ಸ್ವಾಹತಾರ್ಹ ನಿರ್ಧಾರವಾಗಿದೆ ಎಂದು ಖಾಸ್ಮಿ ಹೇಳಿದ್ದು, ‘ಭಾರತದ ಕಾನೂನನ್ನು ನಾವು ಗೌರವಿಸುತ್ತೇವೆ. ಕಾನೂನನ್ನು ಕೈಗೆತ್ತುಕೊಳ್ಳಬೇಡಿ’ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

ನೂಪುರ್‌ ಅವರ ವಿವಾದದ ವಿಚಾರವಾಗಿ ಯಾವುದೇ ಹಿಂಸಾಚಾರ ಕೃತ್ಯದಲ್ಲಿ ಪಾಲ್ಗೊಳ್ಳದಂತೇ ಫತ್ವಾ ಹೊರಡಿಸಲು ಜಮಾತ್‌ ನಿರ್ಧರಿಸಿದೆ. ಅಸಾದುದ್ದೀನ್‌ ಒವೈಸಿ ಹಾಗೂ ಮೊಹಮ್ಮದ್‌ ಮದಾನಿ ಅವರ ವಿರುದ್ಧವಾಗಿಯೂ ಫತ್ವಾ ಹೊರಡಿಸಲಾಗುವುದು ಎಂದು ಜಮಾತ್‌ ತಿಳಿಸಿದೆ.

ಈ ವೇಳೆ, ಹಿಂಸಾತ್ಮಕ ಕೃತ್ಯಗಳಿಗೆ ಕುಮ್ಮಕ್ಕು ನೀಡುವ ಅಥವಾ ಗಲಭೆಕೋರರಿಗೆ ಆರ್ಥಿಕ ನೆರವು ನೀಡುವ ಮುಸ್ಲಿಂ ಸಂಘಟನೆಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಜಮಾತ್‌ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.