ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆ ವೇಳೆ ತಪ್ಪು ಮಾಹಿತಿ ನೀಡಿದಲ್ಲಿ 1000 ರು. ದಂಡ ವಿಧಿಸಲಾಗುತ್ತದೆ.
ನವದೆಹಲಿ (ಜ.17): ಏಪ್ರಿಲ್ 1ರಿಂದ ಆರಂಭವಾಗಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪ್ರಕ್ರಿಯೆ ಸಂದರ್ಭದಲ್ಲಿ ಗಣತಿದಾರರಿಗೆ ಜನರು ತಪ್ಪು/ಸುಳ್ಳು ಮಾಹಿತಿ ನೀಡುವುದು ಅಥವಾ ಮಾಹಿತಿ ನೀಡಲು ನಿರಾಕರಿಸುವುದನ್ನು ಮಾಡಿದರೆ 1 ಸಾವಿರ ರುಪಾಯಿ ದಂಡ ತೆರಬೇಕಾಗುತ್ತದೆ ಎಚ್ಚರ. ಹೌದು. ಈ ಪ್ರಕ್ರಿಯೆ ನಡೆಸುವ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳೇ ಈ ವಿಷಯ ಹೇಳಿದ್ದಾರೆ.
‘ನಾಗರಿಕತ್ವ ನಿಯಮದ ನಿಯಮ-17ರ ಪ್ರಕಾರ ತಪ್ಪು ಮಾಹಿತಿ ನೀಡಿದವರಿಗೆ 1 ಸಾವಿರ ರು. ದಂಡ ಹಾಕಲು ಅವಕಾಶವಿದೆ’ ಎಂದು ಅವರು ಹೇಳಿದ್ದಾರೆ. ‘ಆದರೆ 2011 ಹಾಗೂ 2015ರಲ್ಲಿ ನಡೆದ ಎನ್‌ಪಿಆರ್ ಪ್ರಕ್ರಿಯೆ ವೇಳೆ ಈ ನಿಯಮವನ್ನು ಹೆಚ್ಚು ಬಳಕೆ ಮಾಡಿರಲಿಲ್ಲ’ ಎಂದವರು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಎನ್‌ಪಿಆರ್, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಲೇಖಕಿ ಅರುಂಧತಿ ರಾಯ್ ಅವರು, ‘ಎನ್‌ಪಿಆರ್ ಗಣತಿದಾರರು ನಿಮ್ಮ ಮನೆಗೆ ಬಂದರೆ ಅವರಿಗೆ ತಪ್ಪು ಮಾಹಿತಿ ನೀಡಿ. ನಿಮ್ಮ ಹೆಸರನು ರಂಗಾ-ಬಿಲ್ಲಾ, ಕುಂಗ್‌ಫು-ಕಟ್ಟಾಎಂದು ಬರೆಸಿರಿ’ ಎಂದು ಕರೆ ನೀಡಿದ್ದರು. ಈಗಾಗಲೇ ಎನ್‌ಪಿಆರ್‌ಗೆ ಕೇರಳ, ಪ.ಬಂಗಾಳ ಸರ್ಕಾರಗಳು ಬಹಿಷ್ಕಾರ ಹಾಕಿವೆ.
PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!...
ಪ್ಯಾನ್ ಸಂಖ್ಯೆ ಕೇಳಲ್ಲ:
‘ಎನ್‌ಪಿಆರ್ ಪ್ರಕ್ರಿಯೆ ಕೈಗೊಳ್ಳುವ ಸಲುವಾಗಿ ಪರೀಕ್ಷಾರ್ಥವಾಗಿ ದೇಶದ 73 ಜಿಲ್ಲೆಗಳಲ್ಲಿ ಈಗಾಗಲೇ 30 ಲಕ್ಷ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಗಣತಿ ವೇಳೆ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಮತದಾರ ಗುರುತು ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ- ವಿವರ ನೀಡಲು ಜನರು ಹಿಂದೇಟು ಹಾಕಿಲ್ಲ. ಆದರೆ ಪ್ಯಾನ್ ಸಂಖ್ಯೆ ನೀಡಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಮುಂಬರುವ ಎನ್‌ಪಿಆರ್ ಗಣತಿಯಲ್ಲಿ ಪ್ಯಾನ್ ಸಂಖ್ಯೆ ಕೇಳುವುದನ್ನು ಕೈಬಿಡಲು ತೀರ್ಮಾನಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಧಾರ್, ವೋಟರ್ ಐಡಿ ಕಡ್ಡಾಯವಲ್ಲ:
‘ಇತ್ತೀಚೆಗೆ ಪತ್ರಿಕೆಯೊಂದು, ‘‘ಎನ್‌ಪಿಆರ್ ವೇಳೆ ಆಧಾರ್ ಸಂಖ್ಯೆ, ವೋಟರ್ ಐಡಿ, ಆಧಾರ್ ಸಂಖ್ಯೆ, ಡಿಎಲ್- ಇತ್ಯಾದಿ ವಿವರ ನೀಡುವುದು ಕಡ್ಡಾಯ’’ ಎಂದು ಬರೆದಿತ್ತು. ಇದು ತಪ್ಪು ವರದಿ. ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್, ಡಿಎಲ್ ಸಂಖ್ಯೆ ನೀಡುವುದು ಕಡ್ಡಾಯವಲ್ಲ’ ಎಂದು ಗೃಹ ಸಚಿವಾಲಯದ ವಕ್ತಾರರು ಟ್ವೀಟ್ ಮಾಡಿದ್ದಾರೆ.
