NPR ಕುರಿತ ‘ಸತ್ಯ’ ಬಿಚ್ಚಿಟ್ಟ ಮೋದಿ: ಬೆಚ್ಚಿ ಬಿದ್ದ ಸದನ!
ಪ್ರಧಾನಿ ಮೋದಿ ಬಿಚ್ಚಿಟ್ಟರು NPR ಅಲಿಯತ್ತು| ಮೋದಿ ಹೇಳಿದ ಸತ್ಯ ಕೇಳಿ ಬೆಚ್ಚಿದ ರಾಜ್ಯಸಭೆ| NPR ಜಾರಿಗೆ ಬಂದಿದ್ದು 2004ರಲ್ಲಿ ಎಂದ ಪ್ರಧಾನಿ ಮೋದಿ| 2010ರಲ್ಲಿ ಬಯೋ ಮೆಟ್ರಿಕ್ ದಾಖಲಾತಿ ಸಂಗ್ರಹ ಸುಳ್ಳಾ ಎಂದು ಪ್ರಶ್ನಿಸಿದ ಮೋದಿ| 2004-10ರವರೆಗೆ ಕೇಂದ್ರದಲ್ಲಿ ಯಾರ ಸರ್ಕಾರ ಇತ್ತು ಎಂದು ಕೇಳಿದ ಪ್ರಧಾನಿ| ‘ಅಧಿಕಾರದಲ್ಲಿದ್ದಾಗ ಒಂದು ನೀತಿ, ವಿಪಕ್ಷ ಸ್ಥಾನದಲ್ಲಿದ್ದಾಗ ಒಂದು ನೀತಿ ಕಾಂಗ್ರೆಸ್ ಗುಣ’| ಸಿಎಎ ಹಾಗೂ NPR ಕುರಿತು ಸುಳ್ಳು ಪ್ರಚಾರ ಬೇಡ ಎಂದು ಪ್ರಧಾನಿ ಮನವಿ|
ನವದೆಹಲಿ(ಫೆ.06): ಈಗ ಏರು ಧ್ವನಿಯಲ್ಲಿ ಸಿಎಎ ಹಾಗೂ NPR ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ, 2004ರಲ್ಲಿ ತನ್ನದೇ ಸರ್ಕಾರ ಅಸ್ತಿತ್ವದಲ್ಲಿದ್ದಾಗ NPR ಜಾರಿಗೆ ತಂದಿದ್ದನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ ಎಂದು ಪ್ರಧಾನಿ ಮೋದಿ ಹರಿಹಾಯ್ದಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, NPR ಜಾರಿಗೆ ತಂದ ಕಾಂಗ್ರೆಸ್ ಇಂದು ಅದನ್ನು ವಿರೋಧಿಸುತ್ತಿರುವುದು ಆಶ್ವರ್ಯ ತಂದಿದೆ ಎಂದು ಹೇಳಿದರು.
2010ರಲ್ಲೇ ಬಯೋ ಮೆಟ್ರಿಕ್ ದಾಖಲಾತಿ ಸಂಗ್ರಹಣೆಗೆ ಚಾಲನೆ ನೀಡಲಾಗಿದ್ದು, ನಮ್ಮ ಸರ್ಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಂದ ಮೇಲೆ NPR ಕುರಿತು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದೇ ಅರ್ಥವಲ್ಲವೇ ಎಂದು ಮೋದಿ ಗುಡುಗಿದರು.
1947ರಲ್ಲಿ ಕಾಂಗ್ರೆಸ್ ಮತಾಂಧವಾಗಿತ್ತು, ಈಗ ಸೆಕ್ಯುಲರ್ ಆಗಿದೆ: ಮೋದಿ!
ಅಧಿಕಾರದಲ್ಲಿದ್ದಾಗ ಒಂದು ನೀತಿ, ವಿಪಕ್ಷ ಸ್ಥಾನದಲ್ಲಿದ್ದಾಗ ಒಂದು ನೀತಿ ಕಾಂಗ್ರೆಸ್’ನ ಗುಣವಾಗಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇದೀಗ NPR ವಿರೋಧಿಸುತ್ತಿದೆ ಎಂದು ಮೋದಿ ತರಾಟೆಗೆ ತೆಗೆದುಕೊಂಡರು.
ಸಿಎಎ ಹಾಗೂ NPR ಕುರಿತು ಇಂದಿನ ಕಾಂಗ್ರೆಸ್ ನೀತಿ ಇಬ್ಬಗೆಯದ್ದಾಗಿದ್ದು, NPR ಮೂಲಕ ಜನರ ವೈಯಕ್ತಿಕ ದಾಖಲೆಗಳನ್ನು ಸಂಗ್ರಹಿಸುತ್ತಿರುವುದು ನಿಜವಾದರೆ ಈ ಕೆಲಸ 2004ರಿಂದಲೇ ಆರಂಭವಾಗಿದೆ ಎಂದು ಹೇಳಬಹುದೇ ಎಂದು ಮೋದಿ ಪ್ರಶ್ನಿಸಿದರು.
ಸಿಎಎ ಹಾಗೂ NPR ದೇಶವನ್ನು ಒಗ್ಗೂಡಿಸಲು ಕೈಗೆತ್ತಿಕೊಂಡ ಪ್ರಕ್ರಿಯೆಗಳಾಗಿದ್ದು, ದಯವಿಟ್ಟು ಈ ಕುರಿತು ಸುಳ್ಳು ಪ್ರಚಾರ ಮಾಡಬೇಡಿ ಎಂದು ಪ್ರಧಾನಿ ಮೋದಿ ವಿಪಕ್ಷಗಳಲ್ಲಿ ಮನವಿ ಮಾಡಿದರು.