ನವದೆಹಲಿ(ಜ.31): ರಾಷ್ಟ್ರ ರಾಜಧಾನಿ ದೆಹಲಿಯ ಅತ್ಯಂತ ಬಿಗಿಭದ್ರತೆಯ ಸ್ಥಳದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಹೊರಗೆ ಶುಕ್ರವಾರ ಸಂಭವಿಸಿದ ಲಘು ಬಾಂಬ್‌ ಸ್ಫೋಟದ ರೂವಾರಿ ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಳು ಪ್ರಯತ್ನ ತೀವ್ರಗೊಳಿಸಿದ್ದಾರೆ. ಈ ನಡುವೆ, ಈ ಸ್ಫೋಟದ ಹಿಂದೆ ಇಸ್ರೇಲ್‌ನ ವೈರಿ ದೇಶವಾಗಿರುವ ಇರಾನ್‌ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇಸ್ರೇಲ್‌ಗೆ ತೀಕ್ಷ$್ಣ ಸಂದೇಶ ನೀಡುವ ಉದ್ದೇಶದಿಂದ ಇರಾನ್‌ ಈ ಕೃತ್ಯ ಎಸಗಿರಬಹುದು ಎನ್ನಲಾಗುತ್ತಿದೆ.

ಇರಾನ್‌ ಮೇಲೆ ಗುಮಾನಿ:

ಸ್ಫೋಟದ ಸ್ಥಳದಲ್ಲಿ ಇಸ್ರೇಲ್‌ ರಾಯಭಾರಿಯನ್ನು ಉದ್ದೇಶಿಸಿ ಬರೆಯಲಾದ ಪತ್ರವೊಂದು ಸಿಕ್ಕಿದೆ. ಅದರಲ್ಲಿ ‘ಟ್ರೇಲರ್‌’ ಎಂದು ಬರೆಯಲಾಗಿದೆ. ಅಲ್ಲದೆ ಕಳೆದ ವರ್ಷ ಹತ್ಯೆಗೀಡಾದ ಇರಾನ್‌ ಮಿಲಿಟರಿ ಅಧಿಕಾರಿ ಖಾಸಿಂ ಸೊಲೈಮಾನಿ ಹಾಗೂ ಇರಾನ್‌ ಅಣ್ವಸ್ತ್ರ ವಿಜ್ಞಾನಿ ಮೊಹ್ಸೆನ್‌ ಫಖ್ರೀಜಾದೆ ಅವರ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಈ ಕೃತ್ಯದ ಹಿಂದೆ ಇರಾನ್‌ ಕೈವಾಡವಿರಬಹುದು ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ.

ಸೊಲೈಮಾನಿ ಹಗತ್ಯೆ ಹಿಂದೆ ಇಸ್ರೇಲ್‌ ಕೈವಾಡ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಇಸ್ರೇಲ್‌ಗೂ ಇರಾನ್‌ಗೂ ಎಣ್ಣೆ ಸೀಗೆಕಾಯಿ ಸಂಬಂಧವಿದೆ.

ಆದ ಕಾರಣ, ದೆಹಲಿಯಲ್ಲಿ ಅಡಗಿರಬಹುದಾದ ಇರಾನ್‌ ಪ್ರಜೆಗಳಿಗೆ ಶೋಧ ಕಾರ್ಯ ನಡೆಯುತ್ತಿದೆ. ಕಳೆದ ಕೆಲವು ವಾರಗಳ ಹಿಂದಿನಿಂದ ಭಾರತಕ್ಕೆ ಬಂದಿರುವ ಇರಾನ್‌ ಪ್ರಜೆಗಳ ವಿವರವನ್ನು ನೀಡುವಂತೆ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿಗೆ ದೆಹಲಿ ಪೊಲೀಸರು ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಅಮೋನಿಯಂ ನೈಟ್ರೇಟ್‌ ಬಳಕೆ:

ಘಟನಾ ಸ್ಥಳಕ್ಕೆ ಶನಿವಾರ ದಿಲ್ಲಿ ಪೊಲೀಸರು ಹಾಗೂ ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್‌ಜಿ) ಸಿಬ್ಬಂದಿ ಭೇಟಿ ನೀಡಿ ಸ್ಫೋಟದ ಮಾದರಿಗಳನ್ನು ಸಂಗ್ರಹಿಸಿದ್ದಾರೆ.

ಪರಿಶೀಲನೆ ವೇಳೆ, ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್‌ ಬಳಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ. ಒಂದು ವೇಳೆ ಆರ್‌ಡಿಎಕ್ಸ್‌ ಬಳಕೆಯಾಗಿದ್ದರೆ ಹಾನಿ ತೀವ್ರವಾಗಿರುತ್ತಿತ್ತು ಎಂದು ಹೇಳಲಾಗಿದೆ.

ಆದರೂ ತನಿಖೆಗೆ ಆರಂಭಿಕ ಹಿನ್ನಡೆಯಾಗಿದೆ. ಘಟನಾ ಸ್ಥಳದಲ್ಲಿದ್ದ ಸಿಸಿಟೀವಿಗಳನ್ನು ದೆಹಲಿ ಪೊಲೀಸರು ಪರಿಶೀಲಿಸಿದ್ದು, ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಬಹುತೇಕ ಸಿಸಿಟೀವಿಗಳು ನಿಷ್ಕಿ್ರಯವಾಗಿದ್ದವು ಎಂದು ಮೂಲಗಳು ತಿಳಿಸಿವೆ.