ನಾಗ್ಪುರ(ಏ.27): ದೇಶ ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಕೆಲವೇ ಜನರು ಮಾಡಿದ ತಪ್ಪಿಗೆ ಒಂದು ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಯಾರನ್ನೂ ತಾರತಮ್ಯ ಮಾಡದೇ ತೊಂದರೆಗೆ ಒಳಗಾದ ಜನರಿಗೆ ಸಹಾಯ ಮಾಡಬೇಕು. ವಿರೋಧಿಗಳು ಭಾರತದ ಪರಿಸ್ಥಿತಿಯ ಲಾಭ ಪಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ.

ತಬ್ಲೀಘಿ ಜಮಾತ್‌ ಸದಸ್ಯರಿಂದ ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಏರಿಕೆ ಆಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದು ಮತ್ತು ಅದು ಕೋಮು ಬಣ್ಣ ಪಡೆಯುತ್ತಿರುವ ಬೆನ್ನಲ್ಲೇ ಮೋಹನ್‌ ಭಾಗವತ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಬಡ ಜನರ ನೆರವಿಗೆ ಮುಂದಾದ RSS: ಪಡಿತರ ಕಿಟ್‌ ವಿತರಣೆಗೆ ಸಿದ್ಧತೆ

ಆನ್‌ಲೈನ್‌ ಮೂಲಕ ಮೊದಲ ಬಾರಿ ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್‌ ಭಾಗವತ್‌, ಕೊರೋನಾ ವೈರಸ್‌ನಿಂದ ದೇಶ ಚೇತರಿಸಿಕೊಂಡ ಬಳಿಕ ಸ್ವದೇಶಿ ಆರ್ಥಿಕ ಮಾದರಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಶ ಸ್ವಾವಲಂಬಿ ಆಗಬೇಕು ಎಂದು ಹೇಳಿದ್ದಾರೆ. ಇದೇ ವೇಳೆ ಯಾರಾದರೂ ಭಯ ಅಥವಾ ಸಿಟ್ಟಿನಿಂದ ತಪ್ಪು ಮಾಡಿದರೆ ಇಡೀ ಸಮುದಾಯವನ್ನು ಹೊಣೆ ಮಾಡಬಾರದು. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಇತರರಿಗೆ ಸಹಾಯ ಮಾಡುವುದಕ್ಕೆ ಆದ್ಯತೆ ನೀಡಬೇಕು. ಕೆಲವು ಭಾರತ ವಿರೋಧಿ ಗುಂಪುಗಳು ಲಾಕ್‌ಡೌನ್‌ ನಿಯಮದ ವಿರುದ್ಧ ಜನರನ್ನು ಪ್ರೇರೇಪಿಸುವ ಮತ್ತು ಜನರಲ್ಲಿ ಗೊಂದಲ ಹುಟ್ಟಿಸುವ ಕೆಲಸ ಮಾಡುತ್ತಿವೆ. ನಾವು ಇವುಗಳಿಂದ ದೂರ ಉಳಿಯಬೇಕಿದೆ ಎಂದು ಹೇಳಿದರು.