ನವದೆಹಲಿ (ಅ. 22): ವಾಯುಭಾರ ಕುಸಿತದ ಪರಿಣಾಮವಾಗಿ ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಹಿಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯು ಭಾರ ಕುಸಿತ ಮುಂದಿನ 48 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಅಲ್ಲದೇ ಮುಂದಿನ ಕೆಲವು ದಿನಗಳಲ್ಲಿ ಉತ್ತರ ತಮಿಳುನಾಡು ಅಥವಾ ದಕ್ಷಿಣ ಆಂಧ್ರ ಕರಾವಳಿಯಲ್ಲಿ ವಾಯುಭಾರ ಕುಸಿತ ಸೃಷ್ಟಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇರಳದ ಏಳು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಜಾರಿ ಮಾಡಿದೆ.

ಮಳೆ: ಕರಾವಳಿಯಲ್ಲಿ 27 ರ ತನಕ ರೆಡ್ ಅಲರ್ಟ್

ತಮಿಳುನಾಡಿನಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಮುಂದಿನ 5 ದಿನಗಳ ಕಾಲ ತಮಿಳುನಾಡಿನಾದ್ಯಂತ ಭಾರೀ ಮಳೆ ಆಗುವ ನಿರೀಕ್ಷೆ ಇದೆ.

ಇದೇ ವೇಳೆ ಹಿಂಗಾರು ಮರುತಗಳು ಚುರುಕು ಪಡೆದಿರುವುದರಿಂದ ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಪೂರ್ವ ರಾಜ್ಯಗಳಲ್ಲೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.