ಇದು ಬಡತನನಾ : ಸ್ಕೂಟಿಯಲ್ಲಿ ಬಂದ ಮಹಿಳೆ ಏನ್ ಮಾಡಿದ್ಲು ನೋಡಿ
ಸ್ಕೂಟಿಯಲ್ಲಿ ಬಂದ ಮಹಿಳೆಯೊಬ್ಬರು ಮನೆಯ ಮುಂದಿನ ಹೂಕುಂಡವನ್ನು ಕದ್ದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೆಲ ದಿನಗಳ ಹಿಂದೆ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ವಸತಿ ಸಮುಚ್ಚಯವೊಂದರ ಎದುರಿಗೆ ಇದ್ದ ಅಲಂಕಾರಿಕ ಹೂ ಕುಂಡಗಳನ್ನು ಕದ್ದುಕೊಂಡು ಹೋದಂತಹ ಘಟನೆ ನಡೆದಿತ್ತು. ನೋಯ್ಡಾದಲ್ಲಿ ನಡೆದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಅಲ್ಲದೇ ಮಹಿಳೆಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದವು. ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಕಪ್ಪು ಬಣ್ಣದ ಎಕ್ಟಿವಾ ಸ್ಕೂಟಿಯಲ್ಲಿ ಬಂದ ಮಹಿಳೆಯೊಬ್ಬರು ಮನೆ ಮುಂದೆ ಇದ್ದಂತಹ ಹೂಕುಂಡವನ್ನು ಕದ್ದು ಹೂಕುಂಡದಲ್ಲಿ ಇರಿಸಿ ತೆಗೆದುಕೊಂಡು ಹೋಗಿದ್ದಾರೆ. ಈ ದೃಶ್ಯ ಮನೆ ಮುಂದಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಸ್ಕೂಟಿಯಲ್ಲಿ ಮಹಿಳೆ ಬಂದ ವೇಳೆ ಸ್ಥಳ ನಿರ್ಜನವಾಗಿದ್ದು, ಇದೇ ಸಮಯವನ್ನು ಬಳಸಿಕೊಂಡ ಮಹಿಳೆ ಹೂವಿನ ಕುಂಡದೊಂದಿಗೆ ಘಟನಾ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಈ ರೀತಿಯ ಕಳ್ಳತನದ ಹಿಂದಿನ ಕಾರಣವಾದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇವರಿಗೆ ಸ್ಕೂಟಿ ಕೊಳ್ಳಲು ಹಣವಿದೆ. ಒಂದು ಪುಟ್ಟ ಹೂಕುಂಡ ಕೊಳ್ಳಲು ಬಡತನ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಮಹಿಳೆಯರಿಗೆ ಹೂ ಗಿಡ ಹೂಕುಂಡಗಳನ್ನೆಲ್ಲಾ ಕದಿಯುವುದು ಒಂದು ಚಟವಾಗಿದೆ ಇದರ ಹಿಂದೆ ಏನಾದರು ಸಾಮಾನ್ಯವಾದ ಆಕರ್ಷಣೆ ಇದೆಯೇ ಎಂದು ಮತ್ತೊಬ್ಬರು ಕೇಳಿದ್ದಾರೆ. ಈ ಹೂಕುಂಡದ ಮೇಲೆ ಇರುವ ಗೀಳಿನ ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಆಕೆ ಮನಿ ಪ್ಲಾಂಟ್ ಗಿಡವನ್ನು ಕದ್ದಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ನ್ಯೂ ಟ್ರೆಂಡ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೇಗೋ ಕದ್ದಾಯ್ತಲ್ಲ, ಈಗ ಅದನ್ನು ನಿಮ್ಮ ಮನೆಯ ಬಾಲ್ಕನಿಯಲ್ಲಿ ತೂಗು ಹಾಕಿ ಆಂಟಿ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ
ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು, ಮಹಿಳೆಯರ ಈ ಹೂಕುಂಡ ಕದಿಯುವ ಚಟದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.