Asianet Suvarna News Asianet Suvarna News

ಆ.28ರಂದು ಕೇವಲ 10 ಸೆಕೆಂಡುಗಳಲ್ಲೇ ಕುತುಬ್‌ ಮಿನಾರ್‌ಗಿಂತಲೂ ಎತ್ತರದ ಅವಳಿ ಕಟ್ಟಡ ಧ್ವಂಸ!

 ಕುತಬ್‌ ಮಿನಾರ್‌ಗಿಂತ ಎತ್ತರದ  ಕಾನೂನುಬಾಹಿರವಾಗಿ ನಿರ್ಮಾಣವಾಗಿರುವ ನೋಯ್ಡಾದ 32 ಹಾಗೂ 29 ಅಂತಸ್ತಿನ ಅವಳಿ ಅಪಾರ್ಚ್‌ಮೆಂಟ್‌ಗಳನ್ನು ಸ್ಫೋಟಕ ಬಳಸಿ ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಲಾಗುತ್ತದೆ. 

Noida Twin Towers higher than Qutub Minar collapsed in just 10 seconds gow
Author
Bengaluru, First Published Aug 28, 2022, 7:24 AM IST

ನೋಯ್ಡಾದಲ್ಲಿರುವ ಸೂಪರ್‌ಟೆಕ್‌ ಕಂಪನಿಯ ಅಕ್ರಮ ಅವಳಿ ಕಟ್ಟಡಗಳನ್ನು ಉರುಳಿಸಲು ಕ್ಷಣಗಣನೆ ಆರಂಭವಾಗಿದ್ದು, ಆ.28ರ ಮಧ್ಯಾಹ್ನ 2.30ಕ್ಕೆ 3700 ಕೇಜಿ ಸ್ಫೋಟಕವನ್ನು ಬಳಸಿ ಕಟ್ಟಡ ಧ್ವಂಸಗೊಳಿಸಲಾಗುವುದು. 100 ಮೀ. ಎತ್ತರದ ಈ ಕಟ್ಟಡ ಕುತುಬ್‌ ಮಿನಾರ್‌ಗಿಂತಲೂ ಎತ್ತರವಿದ್ದು, ಸ್ಫೋಟಕಗಳಿಂದ ಕೇವಲ 10 ಸೆಕೆಂಡುಗಳಲ್ಲೇ ಧರೆಗೆ ಉರುಳಲಿದೆ.  ಅಕ್ರಮ ಅವಳಿ ‘ಸೂಪರ್‌ಟೆಕ್‌’ ಗಗನಚುಂಬಿ ಕಟ್ಟಡಗಳನ್ನು ಆ.28ರಂದು ಒಡೆದು ಹಾಕಬೇಕು ಎಂದು ಸುಪ್ರೀಂ ಕೋರ್ಚ್‌ ಆದೇಶಿಸಿತ್ತು. ಅಲ್ಲದೆ, ಒಡೆಯುವಾಗ ತಾಂತ್ರಿಕ ಅಡಚಣೆಗಳು ಎದುರಾದರೆ ಸೆ.4ರವರೆಗೂ ಧ್ವಂಸ ಪ್ರಕ್ರಿಯೆ ನಡೆಸಬಹುದು ಎಂದು ಅನುಮತಿ ನೀಡಿದೆ. ಈ ಕಟ್ಟಡ ಅಕ್ರಮವಾಗಿ ನಿರ್ಮಾಣವಾಗಿದೆ ಎಂಬುದು ಸಾಬೀತಾಗಿದ್ದರಿಂದ ಇದೇ ನ್ಯಾಯಾಲಯ ಈ ಮುನ್ನ ಆ.21ಕ್ಕೆ ಧ್ವಂಸ ಮುಹೂರ್ತ ನಿಗದಿಪಡಿಸಿತ್ತು. ಆದರೆ ಕಟ್ಟಡ ಒಡೆಯುವ ಕಂಪನಿ ಸಮಯ ವಿಸ್ತರಣೆ ಕೋರಿತ್ತು. ಧ್ವಂಸ ಮಾಡುವರು ಕಟ್ಟಡವನ್ನು ಹೊರ ಸ್ಫೋಟ ಮಾಡದೇ ಒಳ ಸ್ಫೋಟ ಮಾಡಲಿದ್ದಾರೆ. ಇದರಿಂದ ಕಟ್ಟಡದ ಅವಶೇಷಗಳು ಅಕ್ಕ ಪಕ್ಕದ ಜಾಗದಲ್ಲಿ ಬೀಳದೇ ಕಟ್ಟಡ ಇದ್ದ ಜಾಗದಲ್ಲಿ ಮಾತ್ರ ಬೀಳಲಿದೆ. ಈ ಮೂಲಕ ಧ್ವಂಸವಾಗಲಿರುವ ದೇಶದ ಅತಿ ಎತ್ತರದ ಕಟ್ಟಡ ಎನಿಸಿಕೊಳ್ಳಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಎಲ್ಲಿದೆ?: ಗ್ರೇಟರ್‌ ನೋಯ್ಡಾ ಎಕ್ಸ್‌ಪ್ರೆಸ್‌ ವೇ ಸಮೀಪದ ಸೆಕ್ಟರ್‌ 93ಎ ನಲ್ಲಿ ಅವಳಿ ಕಟ್ಟಡಗಳಿವೆ. 70 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 7.5 ಲಕ್ಷ ಚದರ ಅಡಿ ವಿಸ್ತಾರದ ಅಪೆಕ್ಸ್‌ (32 ಮಹಡಿ) ಹಾಗೂ ಸಯಾನೆ (29 ಮಹಡಿ) ಕಟ್ಟಡಗಳಲ್ಲಿ ಒಟ್ಟು 915 ಫ್ಲ್ಯಾಟ್‌ಗಳಿವೆ. 1200 ಕೋಟಿ ರು. ಮೌಲ್ಯದ ಕಟ್ಟಡಗಳನ್ನು ಸೂಪರ್‌ಟೆಕ್‌ ಎಮರಾಲ್ಡ್‌ ಕೋರ್ಚ್‌ ಯೋಜನೆಯಡಿಯಲ್ಲಿ ನಿರ್ಮಿಸಲಾಗಿತ್ತು.

ಧ್ವಂಸ ಏಕೆ?: ಯುಪಿ ಅಪಾರ್ಚ್‌ಮೆಂಟ್‌ ಕಾಯ್ದೆ (2010) ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಎಮರಾಲ್ಡ್‌ ಕೋರ್ಚ್‌ ಗ್ರೂಪ್‌ ಹೌಸಿಂಗ್‌ ಸೊಸೈಟಿಯ ನಿವಾಸಿಗಳ ಕಲ್ಯಾಣ ಸಂಘಟನೆ ಸುಪ್ರೀಂಕೋರ್ಚ್‌ಗೆ ಅರ್ಜಿಯನ್ನು ಸಲ್ಲಿಸಿತ್ತು. ಕನಿಷ್ಠ ಅಂತರ ಅಗತ್ಯತೆಯನ್ನು ಉಲ್ಲಂಘಿಸಿ, ಫ್ಲ್ಯಾಟ್‌ ಮಾಲಿಕರ ಒಪ್ಪಿಗೆ ಇಲ್ಲದೇ ಕಟ್ಟಡ ನಿರ್ಮಿಸಿದ್ದಕ್ಕೆ ಸುಪ್ರೀಂಕೋರ್ಚ್‌ ಕಳೆದ ವರ್ಷ ಧ್ವಂಸಕ್ಕೆ ಆದೇಶಿಸಿತ್ತು.

ಯಾರಿಗೆ ಹೊಣೆ?: ಮುಂಬೈಯ ಎಡಿಫೈಸ್‌ ಎಂಜಿನಿಯರಿಂಗ್‌ ಹಾಗೂ ದಕ್ಷಿಣ ಆಫ್ರಿಕಾದ ಜೆಟ್‌ ಡೆಮಾಲಿಷನ್‌ ಸಂಸ್ಥೆ ಧ್ವಂಸ ಪ್ರಕ್ರಿಯೆ ಹೊಣೆ ಹೊತ್ತುಕೊಂಡಿದೆ.

ಯಾವ ತಂತ್ರಜ್ಞಾನ ಬಳಕೆ?: ಅವಳಿ ಕಟ್ಟಡಗಳನ್ನು ಧ್ವಂಸಗೊಳಿಸಲು ಒಳಮುಖ ಸ್ಫೋಟ (ಇಂಪ್ಲೋಜನ್‌) ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. 3700 ಕೇಜಿ ಸ್ಫೋಟಕಗಳನ್ನು ಬಳಸಲಾಗುತ್ತಿದ್ದು, ಕಟ್ಟಡ 10 ಸೆಕೆಂಡುಗಳಲ್ಲಿ ಧರೆಗೆ ಉರುಳಲಿದೆ.

ಎಷ್ಟುಅವಶೇಷ ಸೃಷ್ಟಿ?: ಸ್ಫೋಟದ ಬಳಿಕ 80,000 ಟನ್‌ ತೂಕದ ಅವಶೇಷ ಸೃಷ್ಟಿಯಾಗಲಿದೆ.

20 ಕೋಟಿ ವೆಚ್ಚ: ಧ್ವಂಸಕ್ಕೆ 20 ಕೋಟಿ ರು. ವೆಚ್ಚವಾಗಲಿದ್ದು, ಸೂಪರ್‌ಟೆಕ್‌ 5 ಕೋಟಿ ರು. ವೆಚ್ಚವನ್ನು ಪಾವತಿಸಲಿದೆ. ಉಳಿದ 15 ಕೋಟಿ ರು.ಗಳನ್ನು ಧ್ವಂಸದ ಬಳಿಕ ಲಭ್ಯವಾಗುವ 4000 ಟನ್‌ ಸ್ಟೀಲ್‌ ಮಾರಿ ಸರಿದೂಗಿಸಲಾಗುವುದು.

ಪರಿಸರಕ್ಕೂ ಹಾನಿ: ಧ್ವಂಸ ಪ್ರಕ್ರಿಯೆಯಿಂದಾಗಿ ಭಾರೀ ಪ್ರಮಾಣದಲ್ಲಿ ಅವಶೇಷ, ಧೂಳು ಸೃಷ್ಟಿಯಾಗುವುದು. ಧೂಳಿನಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಕೆಲ ದಿನಗಳ ಕಾಲ ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣ ಏರಿಕೆಯಾಗಬಹುದು ಎಂದು ಪರಿಸರ ತಜ್ಞರು ಆಕ್ಷೇಪಿಸಿದ್ದಾರೆ.

ಸಿದ್ಧತೆ ಹೇಗೆ?:  ಆ. 28 ರಂದು ಅವಳಿ ಗೋಪುರಗಳ ಸಮೀಪದ ಎಮರಾಲ್ಡ್‌ ಕೋರ್ಚ್‌, ಎಟಿಎಸ್‌ ವಿಲೇಜ್‌ ಸೊಸೈಟಿಯ 5000 ನಿವಾಸಿಗಳಿಗೆ ಮುಂಜಾನೆ 7:30 ಒಳಗಾಗಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.

  • 2500 ವಾಹನಗಳನ್ನು ಸ್ಥಳಾಂತರಗೊಳಿಸಲಾಗಿದೆ.
  • ಅವಳಿ ಕಟ್ಟಡದ ಸಮೀಪ ಜನ, ವಾಹನ, ಪ್ರಾಣಿಗಳ ಪ್ರವೇಶ ನಿರ್ಬಂಧಿಸಲಾಗಿದೆ.
  • ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರವನ್ನು ಮಧ್ಯಾಹ್ನ 2.15 ರಿಂದ 2.45ರವರೆಗೆ ಸ್ಥಗಿತಗೊಳಿಸಲಾಗುವುದು.
  • 5 ಆ್ಯಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗುವುದು.

ನೆಲಸಮಕ್ಕೆ 4 ಸಾವಿರ ಕೆಜಿ ಸ್ಫೋಟಕ, 9 ಸೆಕೆಂಡ್ ನಲ್ಲೇ ಧ್ವಂಸವಾಗಲಿದೆ ನೋಯ್ಡಾದ 40 ಮಹಡಿ ಬಿಲ್ಡಿಂಗ್!

ನಿರ್ವಹಣೆ ಹೇಗೆ?: ಕಟ್ಟಡ ಧ್ವಂಸದ ಬಳಿಕ ಲಭ್ಯವಾಗುವ 4000 ಟನ್‌ ಸ್ಟೀಲ್‌ ಮಾರಾಟ ಮಾಡಲಾಗುವುದು. 55000 ಟನ್‌ ಅವಶೇಷವನ್ನು 5-6 ಹೆಕ್ಟೇರ್‌ ಖಾಲಿ ಭೂಮಿಯಲ್ಲಿ ಹಾಗೂ ಅವಳಿ ಕಟ್ಟಡಗಳಿದ್ದ ಜಾಗದಲ್ಲೇ ಹೂಳಲಾಗುವುದು. ಉಳಿದಿದ್ದನ್ನು ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸಂಸ್ಕರಿಸಲಾಗುವುದು.

Noida Twin Towers: ನೊಯ್ಡಾದ ಅವಳಿ ಕಟ್ಟಡ ನೆಲಸಮಕ್ಕೆ ಕೌಂಟ್‌ಡೌನ್

ಹೂಡಿಕೆ ಮರಳಿ ಸಿಗುವುದೇ?: ಅವಳಿ ಕಟ್ಟಡಗಳಲ್ಲಿ ಫ್ಲಾಟ್‌ ಖರೀದಿಸಲು ಹೂಡಿಕೆ ಮಾಡಿದವರಿಗೆ ಹಣ 12% ಬಡ್ಡಿದರದೊಂದಿಗೆ ಮರಳಿ ಕೊಡಬೇಕು ಎಂದು ಸುಪ್ರೀಂ ಕೋರ್ಚ್‌ ಅಧಿಕಾರಿಗಳಿಗೆ ಆದೇಶಿಸಿದೆ. ಅಕ್ರಮ ನಿರ್ಮಾಣದಿಂದಾದ ಕಿರುಕುಳಕ್ಕಾಗಿ ನಿವಾಸಿಗಳ ಕಲ್ಯಾಣ ಸಂಘಟನೆಗೆ 2 ಕೋಟಿ ರು. ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.

Follow Us:
Download App:
  • android
  • ios