ನವದೆಹಲಿ(ನ.23): 2 ನಿರ್ದಿಷ್ಟ ಸ್ನಾತಕೋತ್ತರ ಆಯುರ್ವೇದ ವಿಭಾಗದ ವೈದ್ಯರಿಗೆ ಸಣ್ಣಪುಟ್ಟಗಡ್ಡೆ, ಗ್ಯಾಂಗ್ರಿನ್‌, ಮೂಗು ಹಾಗೂ ಕಣ್ಣಿನ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ತರಬೇತಿ ನೀಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಆಯುರ್ವೇದ ವೈದ್ಯರು ಸರ್ಜರಿ ನಡೆಸಲು ಕಾನೂನುಬದ್ಧ ಮಾನ್ಯತೆ ಸಿಕ್ಕಂತಾಗಿದೆ.

ಜನೌಷಧಿ ಕೇಂದ್ರದಲ್ಲಿ ಇನ್ಮುಂದೆ ಈ ಔಷಧಿಗಳು ಲಭ್ಯ : ಕೇಂದ್ರ ಸಚಿವ DVS ಗುಡ್ ನ್ಯೂಸ್

ಭಾರತೀಯ ವೈದ್ಯ ಪದ್ಧತಿಯನ್ನು ನಿಯಂತ್ರಿಸುವ, ಆಯುಷ್‌ ಸಚಿವಾಲಯದ ಶಾಸನಬದ್ಧ ಸಂಸ್ಥೆಯಾದ ಕೇಂದ್ರೀಯ ಭಾರತೀಯ ವೈದ್ಯ ಪದ್ಧತಿ ಮಂಡಳಿ ಈ ಕುರಿತಂತೆ ಅಧಿಸೂಚನೆ ಹೊರಡಿಸಿದೆ. ಯಾವ ವಿಭಾಗದ ವೈದ್ಯರಿಗೆ, ಯಾವ್ಯಾವ ಸರ್ಜರಿ ತರಬೇತಿ ನೀಡಬೇಕು ಎಂದು ಸ್ಪಷ್ಟನೆ ನೀಡಿದೆ. ಆ ಪ್ರಕಾರ, ಶಾಲ್ಯ ಹಾಗೂ ಶಾಲಾಕ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವೈದ್ಯರಿಗೆ 39 ಸಾಮಾನ್ಯ ಶಸ್ತ್ರಚಿಕಿತ್ಸೆ ಹಾಗೂ ಕಣ್ಣು, ಮೂಗು, ಕಿವಿ, ಗಂಟಲಿಗೆ ಸಂಬಂಧಿಸಿದ 19 ಸರ್ಜರಿಗಳ ಕುರಿತು ತರಬೇತಿ ನೀಡಲು ಸೂಚಿಸಿದೆ. ಈ ಸಂಬಂಧ ‘ಭಾರತೀಯ ವೈದ್ಯಕೀಯ ಕೇಂದ್ರೀಯ ಮಂಡಳಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಂತ್ರಣ, 2016’ಕ್ಕೆ ತಿದ್ದುಪಡಿ ತಂದಿದೆ.

ಆದರೆ ಇದು ನೀತಿ ನಿರೂಪಣೆಯಲ್ಲಾದ ಬದಲಾವಣೆ ಅಲ್ಲ ಅಥವಾ ಹೊಸ ನಿರ್ಧಾರವೂ ಅಲ್ಲ ಎಂದು ಆಯುಷ್‌ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್‌ ಕೊಟೆಚಾ ಸ್ಪಷ್ಟಪಡಿಸಿದ್ದಾರೆ. ಸ್ಪಷ್ಟನೆ ನೀಡುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಲಾಗಿದೆ. ಎಲ್ಲ ರೀತಿಯ ಆಯುರ್ವೇದ ವೈದ್ಯರಿಗೆ ಸರ್ಜರಿ ನಡೆಸಲು ಅನುಮತಿ ಕೊಟ್ಟಿಲ್ಲ. ಯಾವ್ಯಾವ ಸರ್ಜರಿ ನಡೆಸಬಹುದು ಎಂಬ ಸ್ಪಷ್ಟನೆ ನೀಡಲಾಗಿದೆ. ಶಾಲ್ಯ ಹಾಗೂ ಶಾಲಾಕ್ಯ ಪದವೀಧರರು ಮಾತ್ರ ಸರ್ಜರಿ ನಡೆಸಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ನೀವು ಕಷಾಯ ಸೇವಿಸುತ್ತಿದ್ದೀರಾ? : ಸಾವೂ ಸಂಭವಿಸಬಹುದು ಎಚ್ಚರ

ಕಳೆದ 20 ವರ್ಷಗಳಿಂದ ಆಯುರ್ವೇದ ಸಂಸ್ಥೆಗಳಲ್ಲಿ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸಿಕೊಂಡು ಬರಲಾಗಿದೆ. ಈ ಅಧಿಸೂಚನೆಯಿಂದ ಅದಕ್ಕೆ ಕಾನೂನಿನ ಮಾನ್ಯತೆ ಸಿಕ್ಕಂತಾಗಿದೆ ಎಂದು ಕೇಂದ್ರೀಯ ಭಾರತೀಯ ವೈದ್ಯ ಪದ್ಧತಿ ಮಂಡಳಿಯ ಮುಖ್ಯಸ್ಥ ವೈದ್ಯ ಜಯಂತ ದೇವಪೂಜಾರಿ ಅವರು ತಿಳಿಸಿದ್ದಾರೆ. ಯಾವ್ಯಾವ ಸರ್ಜರಿಗಳನ್ನು ಆಯುರ್ವೇದ ವೈದ್ಯರು ಮಾಡಬಹುದು ಎಂಬ ಮಿತಿಯನ್ನು ಇದರಲ್ಲಿ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.