Asianet Suvarna News Asianet Suvarna News

ನೀವು ಕಷಾಯ ಸೇವಿಸುತ್ತಿದ್ದೀರಾ? : ಸಾವೂ ಸಂಭವಿಸಬಹುದು ಎಚ್ಚರ

ಕೊರೋನಾ ನಿಯಂತ್ರಣದ ಉದ್ದೇಶದಿಂದ ರೋಗ ನಿರೊಧ ಶಕ್ತಿ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಕಷಾಯಗಳ ಮೊರೆ ಹೋಗಿದ್ದೀರಾ ಎಚ್ಚರ

Be Aware Of consuming Kashaya snr
Author
Bengaluru, First Published Nov 4, 2020, 9:16 AM IST

ವರದಿ : ರಾಕೇಶ್‌ ಎನ್‌.ಎಸ್‌.

 ಬೆಂಗಳೂರು (ನ.04):  ಕೋವಿಡ್‌-19ರಿಂದ ಪಾರಾಗಲು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಔಷಧಿ, ಕಷಾಯ ಮತ್ತಿತರ ಮನೆಮದ್ದುಗಳನ್ನು ಅತಿಯಾಗಿ ತೆಗೆದುಕೊಳ್ಳುವುದು ಪ್ರಾಣಕ್ಕೆ ಎರವಾಗಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ರೋಗ ನಿರೋಧಕ ಶಕ್ತಿಯಿದ್ದರೆ ಕೊರೋನಾ ಸೋಂಕು ಬಾರದು ಎಂಬ ಕೆಲ ವೈದ್ಯರ ಅಭಿಪ್ರಾಯ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಗಳಿಂದ ಪ್ರೇರಿತಗೊಂಡ ಅನೇಕರು ಅತಿಯಾಗಿ ರೋಗ ನಿರೋಧಕಗಳ ಸೇವನೆಯ ಮೊರೆಹೋಗಿದ್ದಾರೆ. ಇದರಿಂದ ಸೈಟೊಕೈನ್‌ ಸ್ಟೋಮ್‌ರ್‍ (ಜೀವ ನಿರೋಧಕಗಳ ಅನಿಯಂತ್ರಿತ ವರ್ತನೆ) ಆಗಿ ಕೋವಿಡ್‌ ಸೇರಿದಂತೆ ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು, ಶಸ್ತ್ರ ಚಿಕಿತ್ಸೆ ಮಾಡುವುದು ವೈದ್ಯರಿಗೆ ದುಸ್ತರವಾಗಿರುವ ಅನೇಕ ಘಟನೆಗಳು ನಡೆದಿದೆ ಎನ್ನುತ್ತಾರೆ ತಜ್ಞ ವೈದ್ಯರು.

ದೇಶದ ಪ್ರತಿ ಪ್ರಜೆಗೂ ಕೊರೊನಾ ಲಸಿಕೆ: ಪ್ರಧಾನಿ ಮೋದಿ ವಾಗ್ದಾನ ...

ದಿನಕ್ಕೆ ಮೂರು ಬಾರಿ ಕಷಾಯ ಕುಡಿಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದಾಗ ರಕ್ತ ಹೆಪ್ಪುಗಟ್ಟದೇ ತಾವು ಎದುರಿಸಿದ ಆತಂಕದ ಕ್ಷಣಗಳನ್ನು ಮಣಿಪಾಲ ಅಸ್ಪತ್ರೆಯ ಡಾ.ರಘುರಾಜ್‌ ಹೆಗ್ಡೆ ತಮ್ಮ ಟ್ವೀಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ಕೋವಿಡ್‌, ಡೆಂಘಿ, ನ್ಯೂಮೋನಿಯಾಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವ್ಯಕ್ತಿಗಳಲ್ಲಿನ ಅತಿ ರೋಗ ನಿರೋಧಕತೆಯಿಂದಾಗಿ ಚಿಕಿತ್ಸೆಗೆ ಸ್ಪಂದಿಸದಿದ್ದ ಅಥವಾ ಚಿಕಿತ್ಸೆ ನೀಡಲು ಹರಸಾಹಸ ಪಡಬೇಕಾದ ಪ್ರಸಂಗಗಳನ್ನು ಅನೇಕ ವೈದ್ಯರು ಉಲ್ಲೇಖಿಸಿದ್ದಾರೆ.

ಸೈಟೋಕೈನ್‌ ಸ್ಟೋರ್ಮ್ನಿಂದ ಕಷ್ಟ:

ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನ ನೋಡಲ್‌ ಅಫೀಸರ್‌ ಡಾ. ಅಸೀಮಾ ಭಾನು ಪ್ರಕಾರ ಪ್ರತಿರೋಧಕ ಶಕ್ತಿ ಉತ್ತೇಜಕಗಳ ಅತಿ ಸೇವನೆಯಿಂದ ಸೈಟೊಕೈನ್‌ ಸ್ಟೋಮ್‌ರ್‍ ಆಗಿ ಅನೇಕ ರೋಗಿಗಳ ಪ್ರಾಣಕ್ಕೆ ಸಂಚಕಾರ ಬಂದಿದೆ. ಪ್ರತಿರೋಧ ಉತ್ತೇಜಕಗಳನ್ನು ತೆಗೆದುಕೊಂಡರೆ ವೈರಾಣು ಗಂಟಲಿನಿಂದ ಕೆಳಗಿಳಿಯಬಾರದು. ಒಂದು ವೇಳೆ ಇಳಿದು ಶ್ವಾಸಕೋಶ, ಹೃದಯದತ್ತ ಸಾಗಿದವರಿಗೆ ಚಿಕಿತ್ಸೆ ನೀಡುವುದು ಸವಾಲಿನ ಕೆಲಸ ಎಂದು  ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮೂಡಿತು ಭರವಸೆ; ಡಿಸಂಬರ್ ಅಂತ್ಯಕ್ಕೆ ಕೈ ಸೇರಲಿದೆ ಕೋವಿಡ್ ಲಸಿಕೆ? ..

ಕೊರೋನಾ ಬಾಧಿತ ಯುವಕರಲ್ಲಿ ಪ್ರತಿರೋಧ ಶಕ್ತಿ ಹೆಚ್ಚಳದಿಂದ ಹೆಚ್ಚಿನ ಸಮಸ್ಯೆ ತಲೆದೋರಿದೆ. ಹಾಗೆಯೇ ಪೂರ್ವ ಕಾಯಿಲೆಗಳಿದ್ದವರಿಗೂ ಪ್ರಾಣಾಂತಿಕ ಪರಿಣಾಮ ಬೀರಿದೆ ಎಂದು ಅಸೀಮಾ ಭಾನು ಹೇಳುತ್ತಾರೆ.

ಪ್ರತಿರೋಧ ಉತ್ತೇಜಕಗಳ ಸೇವನೆ ಎಂಬ ಪರಿಕಲ್ಪನೆಯೇ ತಪ್ಪು. ನಾವು ದಿನನಿತ್ಯ ಆರೋಗ್ಯಪೂರ್ಣ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮಾಡಬೇಕು. ವಿಟಮಿನ್‌, ಪ್ರೊಟೀನ್‌ ಹೆಚ್ಚಾಗಿರುವ ತರಕಾರಿ, ಡ್ರೈ ಫä್ರಟ್ಸ್‌, ಮಾಂಸಾಹಾರಿಗಳಾದರೆ ಮೊಟ್ಟೆಸೇವನೆ ಮುಂತಾದ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವಂತೆ ಅವರು ಸಲಹೆ ನೀಡುತ್ತಾರೆ.

ಜ್ಞ ವೈದ್ಯರು ಏನು ಹೇಳುತ್ತಾರೆ:

ಕೋವಿಡ್‌ ರೋಗಿಗಳಲ್ಲಿ ನ್ಯುಮೋನಿಯಾ ಇರುವವರಲ್ಲಿ ಸೈಕೊಟೈನ್‌ ಸ್ಟೋಮ್‌ರ್‍ನಿಂದ ಸಾವುನೋವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಜೀವ ನಿರೋಧಕತೆ ಸಾಮಾನ್ಯ ಆರೋಗ್ಯಕ್ಕೆ ಒಳ್ಳೆಯದು. ಸೈಟೊಕೈನ್‌ ಸ್ಟೋಮ್‌ರ್‍ಗೆ ಔಷಧಿಯಾಗಿ ಸ್ಟಿರಾಯ್ಡ್‌$್ಸ ನೀಡುತ್ತಾರೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ, ರಾಜ್ಯ ಕೋವಿಡ್‌-19 ಕಾರ್ಯಪಡೆಯ ಟೆಸ್ಟಿಂಗ್‌ ನೋಡಲ್‌ ಅಧಿಕಾರಿ ಡಾ.ಸಿ.ಎನ್‌. ಮಂಜುನಾಥ್‌ ಹೇಳುತ್ತಾರೆ.

‘ರೋಗ ನಿರೋಧಕತೆಯನ್ನು ಹೆಚ್ಚಿಸುತ್ತೇವೆ ಎಂಬ ವಾದ ಮತ್ತು ಜೀವ ನಿರೋಧಕತೆ ಹೆಚ್ಚಿರುವುದರಿಂದ ಚಿಕಿತ್ಸೆ ನೀಡಲಾಗದು ಎಂಬುದನ್ನು ನಾನು ಒಪ್ಪಲಾರೆ. ಕೊರೋನಾ ವೈರಸ್ಸಿಗೆ ಅದೇ ವೈರಸ್‌ನ ಸೌಮ್ಯ ರೂಪವನ್ನೇ ಚಿಕಿತ್ಸೆಗೆ ಬಳಸುವ ಅಥವಾ ರೋಗದ ಗುಣಲಕ್ಷಣಗಳಿಗೆ ಸಾಮ್ಯತೆ ಹೊಂದಿರುವ ಇತರ ಕಾಯಿಲೆಗಳ ಚಿಕಿತ್ಸೆ ನೀಡುವುದನ್ನು ಪ್ರತಿಪಾದಿಸುತ್ತೇವೆ’ ಎಂದು ಖ್ಯಾತ ಹೋಮಿಯೋಪಥಿ ವೈದ್ಯ ಬಿ.ಟಿ. ರುದ್ರೇಶ್‌ ತಿಳಿಸುತ್ತಾರೆ.

‘ನಾವು ರೋಗ ಪ್ರತಿರೋಧ ಸಾಮರ್ಥ್ಯವನ್ನು ಸಾಮಾನ್ಯ ಸ್ಥಿತಿಗೆ ತಂದು ಆ ಸ್ಥಿತಿಯನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ಚಿಕಿತ್ಸೆ ನೀಡುತ್ತೇವೆ. ಉದಾಹರಣೆಗೆ ಅಸಿಡಿಟಿ ಹೆಚ್ಚಿರುವವರಿಗೂ, ಕಡಿಮೆ ಇರುವವರಿಗೂ ಒಂದೇ ಔಷಧದ ಮೂಲಕ ಚಿಕಿತ್ಸೆ ನೀಡಲು ಆಯುರ್ವೇದದಲ್ಲಿ ಸಾಧ್ಯ. ನೈಸರ್ಗಿಕ ಆಹಾರ ಮತ್ತ ಔಷಧವು ರಾಸಾಯನಿಕಗಳಿಂದ ಕೂಡಿದ ಔಷಧಕ್ಕಿಂತ ವಿಭಿನ್ನವಾಗಿ ವರ್ತಿಸುತ್ತದೆ. ಆಯುರ್ವೇದ ಔಷಧಗಳಿಂದ ಸೈಕೊಟೈನ್‌ ಸ್ಟೋಮ್‌ರ್‍ ಆಗುವ ಸಾಧ್ಯತೆಗಳಿಲ್ಲ’ ಎಂದು ಪ್ರಶಾಂತಿ ಆಯುರ್ವೇದ ಸೆಂಟರ್‌ನ ಮುಖ್ಯಸ್ಥ ಗಿರಿಧರ್‌ ಕಜೆ ಹೇಳುತ್ತಾರೆ.

ನಿದು ಸೈಟೊಕೈನ್‌ ಸ್ಟೋರ್ಮ್?

ಕೊರೋನಾ ವೈರಸ್‌ ದೇಹ ಸೇರುತ್ತಿದ್ದಂತೆ ಅದನ್ನು ಗುರುತಿಸಿ ವೈರಾಣು ನಾಶಕ್ಕೆ ಸೈಟೊಕೈನ್‌ ಎಂಬ ವಿಶೇಷ ಅಂಶ ನಮ್ಮ ದೇಹದಲ್ಲಿ ಬಿಡುಗಡೆ ಆಗುತ್ತದೆ. ಪ್ರತಿಕಾಯ, ಜೀವ ನಿರೋಧಕ ವ್ಯವಸ್ಥೆ ಮತ್ತು ಸೈಟೊಕೈನ್‌ಗಳು ನಿರಂತರ ಹೋರಾಟ ನಡೆಸಿ ಯಶ ಕಂಡರೆ ಕೋವಿಡ್‌ ಗುಣವಾಗುತ್ತದೆ. ಈ ರಕ್ಷಣಾ ವ್ಯವಸ್ಥೆಯನ್ನು ವೈರಾಣು ಭೇದಿಸಿದರೆ ಶ್ವಾಸಕೋಶ, ಹೃದಯ, ರಕ್ತನಾಳಗಳಿಗೆ ಅಪಾಯ ಕಟ್ಟಿಟ್ಟಬುತ್ತಿ. ಸೋಂಕಿನ ಲಕ್ಷಣಗಳು ಆರಂಭಗೊಂಡು ಏಳೆಂಟು ದಿನಗಳಲ್ಲಿ ದೇಹದ ಪ್ರಮುಖ ಭಾಗಗಳಿಗೆ ಸೋಂಕು ಪ್ರವೇಶಿಸುವ ಸಾಧ್ಯತೆ ಹೆಚ್ಚಿದ್ದು, ಹತ್ತರಿಂದ ಹನ್ನೆರಡನೇ ದಿನಕ್ಕೆ ರೋಗಿಯ ಸ್ಥಿತಿ ಗಂಭೀರವಾಗುತ್ತದೆ. ಈ ರೋಗಿಗಳಲ್ಲಿ ಸೈಟೊಕೈನ್‌ ಹೆಚ್ಚಿರುವ ಪ್ರಕರಣಗಳು ಅಧಿಕ ಎಂಬುದು ತಜ್ಞರ ಅಭಿಪ್ರಾಯ. ಸೈಟೊಕೈನ್‌ ಏರಿ ಆದು ಅನಿಯಂತ್ರಿತ ವರ್ತನೆ ತೋರಿ ಶ್ವಾಸಕೋಶದ ಮೇಲೆ ದಾಳಿ ನಡೆಸಿದರೆ ಅದನ್ನು ಸೈಟೊಕೈನ್‌ ಸ್ಟೋಮ್‌ರ್‍ ಎನ್ನುತ್ತಾರೆ. ಇದನ್ನು ನಿಯಂತ್ರಿಸುವುದು ವೈದ್ಯರಿಗೆ ಸವಾಲಿನ ಕೆಲಸ. ಸೈಟೊಕೈನ್‌ ನ ವರ್ತನೆಯ ಬಗ್ಗೆ ಆಳವಾದ ಅಧ್ಯಯನಗಳು ಇನ್ನಷ್ಟೆನಡೆಯಬೇಕಿದೆ.

ನೀವು ಏನು ಮಾಡಬೇಕು?

- ರೋಗ ನಿರೋಧಕತೆ ಹೆಚ್ಚಿಸಲು ಮಾತ್ರೆಗಳ ಮೊರೆ ಹೋಗಬೇಡಿ

- ಕಷಾಯಗಳ ಅತಿ ಸೇವನೆ ಸಲ್ಲದು

- ಅನ್ಯ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರೆ ವೈದ್ಯರ ಜೊತೆ ಸಮಾಲೋಚಿಸಿ ಆಹಾರ ಕ್ರಮ ರೂಢಿಸಿಕೊಳ್ಳಿ

- ಆರೋಗ್ಯಯುತ ಆಹಾರ ಕ್ರಮ ರೂಢಿಸಿಕೊಳ್ಳಿ

- ಕೋವಿಡ್‌ನ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ

Follow Us:
Download App:
  • android
  • ios