ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ನಿಧನ ಸುದ್ದಿ ಸುಳ್ಳು, ಸ್ಪಷ್ಟನೆ ನೀಡಿದ ಪುತ್ರಿ!
ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ ಸುದ್ದಿಯನ್ನು ಸೇನ್ ಪುತ್ರಿ ನಂದನಾ ದೇಬ್ ಸೇನ್ ನಿರಾಕರಿಸಿದ್ದಾರೆ. 89 ವರ್ಷದ ಅಮರ್ತ್ಯ ಸೇನ್ ನಿಧನ ಸುದ್ದಿಯನ್ನು ಅಮರಿಕದ ಪ್ರೋಫೆಸರ್ ಬಹಿರಂಗಪಡಿಸಿದ್ದರು.

ನವದಹಲಿ(ಅ.10) ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಇಹಲೋಕ ತ್ಯಜಿಸಿದ್ದಾರೆ ಅನ್ನೋ ಸುದ್ದಿಯನ್ನು ಸೇನ್ ಪುತ್ರಿ ನಂದನಾ ದೇಬ್ ಸೇನ್ ನಿರಾಕರಿಸಿದ್ದಾರೆ. 89 ವರ್ಷದ ಅಮೃರ್ತ್ಯ ಸೇನ್ ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲಿದ್ದರು.ಇದೀಗ ಸೇನ್ ನಿಧನರಾಗಿದ್ದಾರೆ ಎಂದು ಅಮೆರಿಕನ್ ಪ್ರೋಫೆಸರ್ ಕ್ಲಾಡಿಯಾ ಗೋಲ್ಡಿನ್ ಬಹಿರಂಗ ಪಡಿಸಿದ್ದರು. ಆದರೆ ಈ ಸುದ್ದಿ ಸುಳ್ಳು ಎಂದು ಖುದ್ದು ಸೇನ್ ಪುತ್ರಿ ಸ್ಪಷ್ಟಪಡಿಸಿದ್ದಾರೆ.
ಕ್ಲಾಡಿಯಾ ಗೋಲ್ಡಿನ್ ಹೆಸರಿನ ನಕಲಿ ಎಕ್ಸ್ ಖಾತೆಯಲ್ಲಿ ಈ ಸುದ್ದಿ ಹರಡಲಾಗಿದೆ. ಭಾರತ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟಗೊಳ್ಳುತ್ತಿದ್ದಂತೆ ಪುತ್ರಿ ನಂದನಾ ದೇಬ್ ಸೇನ್ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇದೇ ವೇಳೆ ಈ ರೀತಿ ಸುಳ್ಳು ಸುದ್ದಿ ಹರಡದಂತೆ ಮನವಿ ಮಾಡಿದ್ದಾರೆ.
ಚಿಂತಕ, ಅರ್ಥಶಾಸ್ತ್ರಜ್ಞ, ಸಾಮಾಜಿಕ ತತ್ವಶಾಸ್ತ್ರಕ್ಕೆ ಕೊಡುಗೆ ನೀಡುವ ಮೂಲಕ ದೇಶ ವಿದೇಶದಲ್ಲಿ ಅಮರ್ತ್ಯ ಸೇನ್ ಪ್ರಸಿದ್ಧಿಯಾಗಿದ್ದಾರೆ. ಇಂಗ್ಲೆಂಡ್ ಹಾಗೂ ಅಮೆರಿಕದಲ್ಲಿ ಅರ್ಥಶಾಸ್ತ್ರ ಪ್ರೋಫೆಸರ್ ಆಗಿ ಸೇವೆ ಸಲ್ಲಿಸಿರುವ ಅಮರ್ತ್ಯ ಸೇನ್ 1933ರರ್ಲಿ ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಹುಟ್ಟಿದರು. 1998ರಲ್ಲಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದೇ ವರ್ಷ ಭಾರತ ಸರ್ಕಾರ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಸದ್ಯ ಥಾಮಸ್ ಲೆಮಂಟ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಮೃತ್ಯ ಸೇನ್, ದೇಶ ವಿದೇಶಗಳಲ್ಲಿ ಅಪಾರ ವಿದ್ಯಾರ್ಥಿ ಬಳಗ ಹೊಂದಿದ್ದಾರೆ.