‘ಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಅಥವಾ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಇರುವ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟುವಂತೆ ಪ್ರಯಾಣಿಕರನ್ನು ಒತ್ತಾಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ನವದೆಹಲಿ: ‘ಅಪೂರ್ಣವಾಗಿರುವ, ಗುಂಡಿಗಳು ಬಿದ್ದಿರುವ ಅಥವಾ ಸಂಚರಿಸಲು ಸಾಧ್ಯವಾಗದಷ್ಟು ದಟ್ಟಣೆ ಇರುವ ಹೆದ್ದಾರಿಗಳಲ್ಲಿ ಟೋಲ್‌ ಕಟ್ಟುವಂತೆ ಪ್ರಯಾಣಿಕರನ್ನು ಒತ್ತಾಯಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ಮೂಲಕ, ಜಾಮ್‌ ಆಗಿದ್ದ ಹೆದ್ದಾರಿಯೊಂದರಲ್ಲಿ ಸುಂಕ ವಸೂಲಾತಿ ಮಾಡುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಎಡಪ್ಪಳ್ಳಿ–ಮನ್ನುತಿ ನಡುವಿನ 65 ಕಿ.ಮೀ. ಹೆದ್ದಾರಿಯಲ್ಲಿ ಕಳೆದ ವಾರ 12 ತಾಸುಗಳ ಕಾಲ ವಾಹನದಟ್ಟಣೆಯಾಗಿತ್ತು. ಈ ವೇಳೆ ನಿಂತಲ್ಲೇ ನಿಂತಿದ್ದ ಪ್ರಯಾಣಿಕರು, 150 ರು. ಸುಂಕವನ್ನು ಕಟ್ಟಬೇಕಾಗಿಲ್ಲ ಎಂದು ಆ.6ರಂದು ಹೈಕೋರ್ಟ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್‌ನ ಕದ ತಟ್ಟಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಬಿ.ಆರ್‌. ಗವಾಯಿ, ನ್ಯಾ। ಕೆ ವಿನೋದ್‌, ಎನ್‌.ವಿ. ಅಂಜಾರಿಯಾ ಅವರ ಪೀಠ, ಸುಂಕ್‌ ವಸೂಲಾತಿಯಾಗದಿದ್ದರೆ ಆಗುವ ನಷ್ಟಕ್ಕಿಂತ ಸಾರ್ವಜನಿಕರ ಹಿತಕ್ಕೇ ಪ್ರಾಮುಖ್ಯತೆ ನೀಡಿ ಆದೇಶ ಹೊರಡಿಸಿದೆ. ‘ನಾಗರಿಕರು ಈಗಾಗಲೇ ತೆರಿಗೆ ಪಾವತಿಸಿರುವ ರಸ್ತೆಗಳಲ್ಲಿ ಮುಕ್ತವಾಗಿ, ಗಟಾರ, ಗುಂಡಿ ತುಂಬಿದ ರಸ್ತೆಯಲ್ಲಿ ಸಂಚರಿಸಲಿ’ ಎಂದು ಖಾರವಾಗಿ ಹೇಳಿದೆ.

ಈ ಮಾರ್ಗದಲ್ಲಿ ಟೋಲ್‌ ಪಾವತಿಯನ್ನು 4 ವಾರ ಅಥವಾ ಪರಿಸ್ಥಿತಿ ಸುಧಾರಿಸುವ ತನಕ ಜಾರಿಯಲ್ಲಿ ಇಡಲಾಗುವುದು.