ಜ್ಞಾನವಾಪಿ ಸಂಕೀರ್ಣದ ಕೆಳ ಮಹಡಿಯಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿರುವ ವಾರಣಾಸಿ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿದ್ದ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್‌ ಈ ಅರ್ಜಿಯನ್ನು ತಿರಸ್ಕಾರ ಮಾಡಿದೆ. 

ನವದೆಹಲಿ (ಫೆ.2): ಜ್ಞಾನವಾಪಿ ಮಸೀದಿಯ ಕೆಳಮಹಡಿಯಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿರುವ ವಾರಣಾಸಿ ಜಿಲ್ಲಾ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ಗೆ ಏರಿದ್ದ ಮಸೀದಿ ಸಮಿತಿಗೆ ಹಿನ್ನಡೆಯಾಗಿದೆ. ಜ್ಞಾನವಾಪಿ ಮಸೀದಿಯ ಕೆಳ ಮಹಡಿಯಲ್ಲಿ ಹಿಂದುಗಳ ಪೂಜೆಗೆ ಯಾವುದೇ ರೀತಿಯ ತಡೆ ನೀಡಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಶುಕ್ರವಾರ ತಿಳಿಸಿದೆ. ಅಲಹಾಬಾದ್ ಹೈಕೋರ್ಟ್‌ನಲ್ಲಿ ಜ್ಞಾನವಾಪಿ ಪ್ರಕರಣದ ಇಂದಿನ ವಿಚಾರಣೆ ಪೂರ್ಣಗೊಂಡಿದ್ದು, ಈ ಸಮಯದಲ್ಲಿ ಮಸೀದಿ ಸಮಿತಿಗೆ ಹೈಕೋರ್ಟ್‌ನಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಇದರಿಂದಾಗಿ ಜ್ಞಾನವಾಪಿಯಲ್ಲಿರುವ ನೆಲಮಾಳಿಗೆಯಲ್ಲಿ ಹಿಂದುಗಳ ಪೂಜೆ ಮುಂದುವರಿಯುತ್ತದೆ. ಮುಂದಿನ ವಿಚಾರಣೆ ಫೆಬ್ರವರಿ 6 ರಂದು ಹೈಕೋರ್ಟ್‌ನಲ್ಲಿ ನಡೆಯಲಿದೆ. ಮಸೀದಿ ಸಮಿತಿಯು ತನ್ನ ಅರ್ಜಿಯಲ್ಲಿ ಪೂಜಾ ಸೇವೆಗಳಿಗೆ ಮಧ್ಯಂತರ ನಿಷೇಧವನ್ನು ಕೋರಿತ್ತು, ಆದರೆ ನ್ಯಾಯಾಲಯವು ಈ ಅನುಮತಿ ನೀಡಿಲ್ಲ. ಫೆಬ್ರುವರಿ 6 ರೊಳಗೆ ತನ್ನ ಮನವಿಯನ್ನು ತಿದ್ದುಪಡಿ ಮಾಡುವಂತೆ ನ್ಯಾಯಾಲಯವು ಮಸೀದಿ ಸಮಿತಿಯನ್ನು ಕೇಳಿದೆ. ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ನ್ಯಾಯಾಲಯ ಆಡಳಿತಕ್ಕೆ ಆದೇಶ ನೀಡಿದೆ.

ಜ್ಞಾನವಾಪಿಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ: ಮಧ್ಯರಾತ್ರಿ ಭಕ್ತರಿಂದ ಹರಹರ ಮಹದೇವ ಘೋಷಣೆ

ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯು, ಮಸೀದಿ ಆವರಣದಲ್ಲಿರುವ ವ್ಯಾಸ್ ಜಿ ನೆಲಮಾಳಿಗೆಯಲ್ಲಿ ಹಿಂದೂ ಭಕ್ತರಿಗೆ ಪೂಜೆ ಮಾಡಲು ವಾರಣಾಸಿ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ನಿರ್ಧಾರದ ವಿರುದ್ಧ ಮಸೀದಿ ಸಮಿತಿ ಗುರುವಾರ ಅಲಹಾಬಾದ್‌ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದಕ್ಕೂ ಮುನ್ನ ಮಸೀದಿ ಸಮಿತಿ ನೇರವಾಗಿ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು. ಆದರೆ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ನೀವು ಮೊದಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದ್ದರಿಂದ ಮಸೀದಿ ಸಮಿತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿತ್ತು.

ಜ್ಞಾನವಾಪಿಯ ಗೋಡೆಗಳಲ್ಲಿ ಸಿಕ್ಕ ತೆಲುಗು ಶಾಸನಗಳಲ್ಲಿದೆ ಮಂದಿರದ ಮಾಹಿತಿ!