ಈ ಬಾರಿ ಸಂಸತ್ ಅಧಿವೇಶನದಲ್ಲಿ ಕೊಂಚ ಬದಲಾವಣೆ: ಪ್ರತಿಪಕ್ಷಗಳು ವಿರೋಧ
ಸಂಸತ್ತಿನ ಮುಂಗಾರು ಅಧಿವೇಶನ ಇದೇ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ವರೆಗೆ ನಡೆಯಲಿಯಲಿದೆ, ಆದ್ರೆ ಬಾರಿ ಅಧಿವೇಶನ ಕೊಂಚ ವಿಭಿನ್ನವಾಗಿರಲಿದೆ.
ನವದೆಹಲಿ, (ಸೆ.02): ಕೊರೋನಾ ಭೀತಿ ನಡುವೆ ಸಂಸತ್ತಿನ ಮುಂಗಾರು ಅಧಿವೇಶನ ಇದೇ ಸೆಪ್ಟೆಂಬರ್ 14ರಿಂದ ಅಕ್ಟೋಬರ್ 1ರ ವರೆಗೆ ನಡೆಯಲಿದೆ. ಆದ್ರೆ, ಈ ಬಾರಿ ಕಲಾಪ ಮಧ್ಯೆ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಖಾಸಗಿ ಮಸೂದೆಗಳ ಮಂಡನೆ ಕೂಡ ಇರುವುದಿಲ್ಲ, ಶೂನ್ಯ ಅವಧಿ ರದ್ದುಗೊಳಿಸಲಾಗಿದೆ ಎಂದು ಲೋಕಸಭೆ ಮತ್ತು ರಾಜ್ಯಸಭೆ ಸಚಿವಾಲಯಗಳು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿವೆ.
ಪ್ರಶ್ನೋತ್ತರ ಕಲಾಪ ಮತ್ತು ಖಾಸಗಿ ಮಸೂದೆ ಮಂಡನೆ ಹೊರತುಪಡಿಸಿ ಬೇರೆಲ್ಲಾ ನಡಾವಳಿಗಳು ನಿಗದಿಯಂತೆ ಸಾಗಲಿವೆ ಎಂದು ಅಧಿಸೂಚನೆ ತಿಳಿಸಿದೆ.
ಸೆ.14ರಿಂದ ಅ.1ರವರೆಗೆ ಸಂಸತ್ ಮುಂಗಾರು ಅಧಿವೇಶನ!
ಸಂಸತ್ ಮುಂಗಾರು ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ ಇರುವುದಿಲ್ಲ ಎಂದು ರಾಜ್ಯಸಭಾ ಕಾರ್ಯದರ್ಶಿ ಹೊರಡಿಸಿರುವ ಆದೇಶಕ್ಕೆ ಸಾಮಾಜಿಕ ಜಾಲತಾಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪ್ರತಿಪಕ್ಷಗಳಿಂದ ವಿರೋಧ:
ಪ್ರಶ್ನೋತ್ತರ ಕಲಾಪ ರದ್ದುಗೊಳಿಸಿದ್ದಕ್ಕೆ ಪ್ರತಿಪಕ್ಷಗಳ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪ ಇಲ್ಲದಿರುವುದರಿಂದ ವಿರೋಧ ಪಕ್ಷಗಳ ಸಂಸದರು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ, ಕೋವಿಡ್-19 ಹೆಸರಿನಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲಲಾಗುತ್ತಿದೆ ಎಂದು ಟಿಎಂಸಿ ಸಂಸದ ಓಬ್ರಿಯನ್ ಆರೋಪಿಸಿದ್ದಾರೆ.
ಕಲಾಪದ ಸಮಯ
ಕಲಾಪ ಶನಿವಾರ ಮತ್ತು ಭಾನುವಾರ ಕೂಡ ಜರುಗಲಿವೆ. ಸೆಪ್ಟೆಂಬರ್ 14ರಂದು ಲೋಕಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ, ರಾಜ್ಯಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.
ಸೆಪ್ಟೆಂಬರ್ 14ರ ನಂತರ ರಾಜ್ಯಸಭಾ ಅಧಿವೇಶನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಸಭಾ ಕಲಾಪ ಅಪರಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ನಡೆಯಲಿದೆ.
ಕೋವಿಡ್-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬದಲಾವಣೆ ಮಾಡಲಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಪ್ರಶ್ನೋತ್ತರ ಅವಧಿ ಮತ್ತು ಖಾಸಗಿ ಮಸೂದೆ ಮಂಡನೆಗಳು ಇರುವುದಿಲ್ಲ ಎಂದು ಲೋಕಸಭಾಧ್ಯಕ್ಷರು ತಿಳಿಸಿದ್ದಾರೆ.