ಸೆ.14ರಿಂದ ಅ.1ರವರೆಗೆ ಸಂಸತ್‌ ಮುಂಗಾರು ಅಧಿವೇಶನ!

ಸೆ.14ರಿಂದ ಅ.1ರವರೆಗೆ ಸಂಸತ್‌ ಮುಂಗಾರು ಅಧಿವೇಶನ| ಸಂಸದೀಯ ಸಂಪುಟ ಸಮಿತಿ ಶಿಫಾರಸು| ಸಾಮಾಜಿಕ ಅಂತರ ಕಾಯ್ದುಕೊಂಡು ಆಸನ ವ್ಯವಸ್ಥೆ

Monsoon Session Of Parliament From Sept 14 To Oct 1

 ನವದೆಹಲಿ(ಆ.26): ಸಂಸತ್ತಿನ ಮುಂಗಾರು ಅಧಿವೇಶನವನ್ನು ಸೆಪ್ಟೆಂಬರ್‌ 14ರಿಂದ ಅಕ್ಟೋಬರ್‌ 1ರವರೆಗೆ ನಡೆಸಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನದಲ್ಲಿ 18 ದಿನಗಳ ಕಲಾಪ ನಡೆಸಲು ತೀರ್ಮಾನಿಸಲಾಗಿದೆ. ಕೊರೋನಾ ವೈರಸ್‌ ಭೀತಿಯ ನಡುವೆ ಮೊದಲ ಬಾರಿ ಪೂರ್ಣ ಪ್ರಮಾಣದ ಅಧಿವೇಶನ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾಪ ನಡೆಸಲು ತೀರ್ಮಾನಿಸಲಾಗಿದೆ.

ರಾಜ್ಯಸಭೆ ಹಾಗೂ ಲೋಕಸಭೆ ಸದಸ್ಯರು ಕಲಾಪ ನಡೆಯುವ ಸ್ಥಳ, ಚೇಂಬರ್‌ ಹಾಗೂ ಗ್ಯಾಲರಿಗಳಲ್ಲಿ ಆಸೀನರಾಗಲಿದ್ದಾರೆ. ಬರೀ ಕಲಾಪದ ಸ್ಥಳದಲ್ಲಿ ಕುಳಿತುಕೊಂಡರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಚೇಂಬರ್‌ ಹಾಗೂ ಗ್ಯಾಲರಿಗಳಲ್ಲೂ ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಾಜ್ಯಸಭೆಯ 60 ಸದಸ್ಯರಿಗೆ ಚೇಂಬರ್‌ನಲ್ಲಿ, 51 ಸದಸ್ಯರಿಗೆ ಗ್ಯಾಲರಿಯಲ್ಲಿ ಹಾಗೂ 132 ಸದಸ್ಯರಿಗೆ ಲೋಕಸಭೆಯ ಚೇಂಬರ್‌ನಲ್ಲಿ ಆಸನ ನೀಡಲಾಗುತ್ತದೆ. ಲೋಕಸಭೆ ಸದಸ್ಯರಿಗೂ ಇದೇ ಮಾದರಿಯ ಆಸನ ವ್ಯವಸ್ಥೆ ಇರುತ್ತದೆ.

ವಿವಿಧ ಭಾಗಗಳಲ್ಲಿ ಸದಸ್ಯರು ಆಸೀನರಾಗುವ ಕಾರಣ, ಕಲಾಪವನ್ನು ಯಾವುದೇ ಅಡೆತಡೆಯಿಲ್ಲದೇ ವೀಕ್ಷಿಸುವಂತಾಗಲು ದೊಡ್ಡ ಡಿಸ್‌ಪ್ಲೇ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತದೆ. ಶೀಘ್ರದಲ್ಲೇ ಇದರ ಕಲಾಪದ ರಿಹರ್ಸಲ್‌ ನಡೆಯಲಿದೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಕೊರೋನ ವೈರಸ್‌ ಹಾವಳಿ ಆರಂಭಗೊಂಡಿತ್ತು. ಹೀಗಾಗಿ ಕಲಾಪವನ್ನು ಅರ್ಧಕ್ಕೇ ಮಾ.23ರಂದು ಮೊಟಕುಗೊಳಿಸಲಾಗಿತ್ತು.

Latest Videos
Follow Us:
Download App:
  • android
  • ios