ಪ್ರಾದೇಶಿಕ ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವಿಲ್ಲ: ಕೇಂದ್ರ
ಪ್ರಾದೇಶಿಕ ಭಾಷೆಗೆ ಅಧಿಕೃತ ಭಾಷೆ ಸ್ಥಾನಮಾನವಿಲ್ಲ: ಕೇಂದ್ರ| ‘ತ್ರಿಭಾಷಾ ಸೂತ್ರದಲ್ಲೇ ಪ್ರಾದೇಶಿಕ ಭಾಷೆಗೆ ಮೊದಲ ಸ್ಥಾನವಿದೆ’
ನವದೆಹಲಿ(ಸೆ.17): ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಅನುಸೂಚಿತ ಭಾಷೆಗಳಿಗೆ ಅಧಿಕೃತ ಭಾಷೆಗಳ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾವ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ತನ್ಮೂಲಕ ಕನ್ನಡ, ತಮಿಳು, ಮಲೆಯಾಳಂ ಮುಂತಾದ ಪ್ರಾದೇಶಿಕ ಭಾಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸಮನಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪುನರುಚ್ಚರಿಸಿದೆ.
ಹಿಂದಿ ಹೇರಿಕೆ ವಿರುದ್ಧ ಸಿಡಿದ ಕನ್ನಡ ಸ್ಟಾರ್‌ಗಳು!
ರಾಜ್ಯಸಭೆಯಲ್ಲಿ ಸಂಸದ ವೈಕೋ ಕೇಳಿದ ಪ್ರಶ್ನೆಗೆ ಗುರುವಾರ ಉತ್ತರ ನೀಡಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಹಿಂದಿ ಮತ್ತು ಇಂಗ್ಲಿಷೇತರ ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಭಾಷೆಗಳ ಸ್ಥಾನ ನೀಡಲು ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ. 1968ರ ಅಧಿಕೃತ ಭಾಷೆಗಳ ಕಾಯ್ದೆಯಲ್ಲೇ ಪ್ರಾದೇಶಿಕ ಭಾಷೆಗಳಿಗೂ ಮಾನ್ಯತೆ ನೀಡುವ ತ್ರಿಭಾಷಾ ಸೂತ್ರವನ್ನು ಹೇಳಲಾಗಿದೆ. ಅದನ್ನು ರಾಜ್ಯಗಳ ಜೊತೆ ಸಮಾಲೋಚನೆ ನಡೆಸಿಯೇ ಜಾರಿಗೆ ತರಲಾಗಿದೆ. ಅದರ ಪ್ರಕಾರ ರಾಜ್ಯಗಳಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳ ಬೋರ್ಡ್‌ಗಳನ್ನು ಮೊದಲಿಗೆ ಪ್ರಾದೇಶಿಕ ಭಾಷೆ, ನಂತರ ಹಿಂದಿ ಮತ್ತು ಕೊನೆಯಲ್ಲಿ ಇಂಗ್ಲಿಷ್ ಈ ಅನುಕ್ರಮದಲ್ಲಿ ಬರೆಯಬೇಕು ಎಂಬ ನಿಯಮವಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು!
ಸುಪ್ರೀಂಕೋರ್ಟ್‌ನ ಸಲಹೆಯಂತೆ ಕೇಂದ್ರ ಸರ್ಕಾರ ಅಧಿಕೃತ ಭಾಷೆಗಳ ಕಾಯ್ದೆಗೆ ತಿದ್ದುಪಡಿ ತರಲಿದೆಯೇ? ಇಲ್ಲ ಎಂದಾದರೆ ದಕ್ಷಿಣ ಭಾರತದ ಹಾಗೂ ಈಶಾನ್ಯ ರಾಜ್ಯಗಳ ಜನರು, ವಿಶೇಷವಾಗಿ ಹಳ್ಳಿಗಳ ಜನರು ಕೇಂದ್ರ ಸರ್ಕಾರದ ಸಂವಹನ ಹಾಗೂ ನಿಯಮಗಳನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ವೈಕೋ ಕೇಳಿದ್ದರು. ಅದಕ್ಕೆ ಮೇಲಿನಂತೆ ಉತ್ತರ ಲಭಿಸಿದೆ.