ಬೆಂಗಳೂರು((ಸೆ.16): ದಕ್ಷಿಣದ ರಾಜ್ಯಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಯುತ್ತಿದ್ದ ಅಭಿಯಾನಕ್ಕೆ ಈಗ ಕನ್ನಡದ ನಟರೂ ಸೇರಿಕೊಂಡಿದ್ದಾರೆ. ಹಿಂದಿ ಹೇರಿಕೆ ವಿರೋಧಿಸಿ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕರು ಸಾಮಾಜಿಕ ಜಾಲತಾಣದಲ್ಲಿ ದನಿ ಎತ್ತಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಡಕ್ ಮಾತು..!

ರಿಷಭ್‌ ಶೆಟ್ಟಿ, ಧನಂಜಯ್‌, ಸಂತೋಷ್‌ ಆನಂದರಾಮ್‌, ಚೇತನ್‌ ಸೇರಿದಂತೆ ಹಲವಾರು ಮಂದಿ ಹಿಂದಿ ಹೇರಿಕೆ ವಿರೋಧಿಸಿ ಟ್ವೀಟ್‌ ಮಾಡಿದ್ದು, ಇದೀಗ ಪ್ರಖ್ಯಾತ ನಟ ದರ್ಶನ್‌ ಕೂಡ ದನಿ ಸೇರಿಸಿದ್ದಾರೆ. ‘ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್‌ ಆಚರಣೆ ಯೋಗ್ಯವಲ್ಲ’ ಎಂಬ ಅವರ ಟ್ವೀಟ್‌ನಿಂದ ಹಿಂದಿ ಹೇರಿಕೆ ವಿರೋಧಿ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. #StopHindiImposition ಅ ಹ್ಯಾಶ್‌ಟ್ಯಾಗ್‌ ಟ್ವೀಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಮಂಗಳವಾರ ಟ್ವೀಟ್‌ ಮಾಡಿರುವ ದರ್ಶನ್‌, ‘ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್‌ ಆಚರಣೆ ಯೋಗ್ಯವಲ್ಲ’ ಎಂದು ಹೇಳಿದ್ದಾರೆ.

ಹಿಂದಿ ದಿವಸ್‌ ಆಚರಣೆಯನ್ನು ಸಂಪೂರ್ಣ ವಿರೋಧಿಸಿರುವ ಅವರು, ‘ಹಿಂದಿ ದಿವಸ್‌ ಆಚರಣೆ ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ಉತ್ತರದ ಯಾವುದೋ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ನಮ್ಮ ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯ ಸಂಗತಿ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ನಮ್ಮ ಕೊನೆಯುಸಿರು ಇರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು ಹೇಳಿದ್ದಾರೆ.

ಹಿಂದಿ ಭಾಷಿಕರು ಕನ್ನಡ ಕಲಿಯಿರಿ: ವೆಂಕಯ್ಯ ನಾಯ್ಡು!

ಇತರರಿಂದಲೂ ಟ್ವೀಟ್‌:

ಇದಕ್ಕೂ ಮೊದಲು ನಟ, ನಿರ್ದೇಶಕ ರಿಷಭ್‌ ಶೆಟ್ಟಿಹಿಂದಿ ಹೇರಿಕೆ ವಿರೋಧಿಸಿ ಟ್ವೀಟ್‌ ಮಾಡಿದ್ದರು. ‘ಸುಲಿದಿತ್ತ ರಸಬಾಳೆಯಷ್ಟುಸುಲಲಿತವಾದ ಭಾಷೆ ನಮ್ಮದಿರುವಾಗ, ಇನ್ನೊಂದು ಭಾಷೆಯ ಅಗತ್ಯವಾದರೂ ಏನು? ನಾವು ಕನಸು ಕಾಣೋ ಭಾಷೆ, ನಮ್ಮ ನಾಲಿಗೆಯಲಾಡಲು ಬಿಡಿ. ಓಲೈಸುವ ನೆಪದಿ ನಮ್ಮ ಕಂದಮ್ಮಗಳಾಡೋ ‘ಅಮ್ಮ’ ಪದದಿಂದ ‘ಅ’ ತೆಗೆದು ‘ಮಾ’ ಉಳಿಸುವ ನಿಮ್ಮ ಪ್ರಯತ್ನಕ್ಕೆ ಧಿಕ್ಕಾರವಿರಲಿ’ ಎಂದು ಅವರು ಬರೆದಿದ್ದಾರೆ.

ನಟ ಧನಂಜಯ್‌, ‘ನನ್ನ ದೇಶ ಭಾರತ, ನನ್ನ ಬೇರು ಕನ್ನಡ. ಎಲ್ಲಾ ಭಾಷೆಯನ್ನು ಗೌರವಿಸುತ್ತೇನೆ, ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು’ ಎಂದಿದ್ದಾರೆ. ಮಾಸ್ಟರ್‌ಪೀಸ್‌, ಯುವರತ್ನ ಸಿನಿಮಾಗಳ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌, ‘ನಾವು ನಮ್ಮ ಭಾಷೆಯನ್ನ ಪ್ರೀತಿಸೋಣ. ಇನ್ನೊಂದು ಭಾಷೆಯನ್ನ ದ್ವೇಷಿಸುವುದು ಬೇಡ! ನಮ್ಮ ಊರಿಗೆ ಬರುವ ಪರಭಾಷಿಕ ಹೆಚ್ಚು ಅವನ ಭಾಷೆಯಲ್ಲೇ ಮಾತನಾಡುತ್ತಾನೆ, ನಾವು ಅವರ ಭಾಷೆಯಲ್ಲೇ ಉತ್ತರಿಸೋಕೆ ಪ್ರಯತ್ನಿಸುತ್ತೇವೆ! ಅವರಿಗಿರುವ ಮಾತೃಪ್ರೇಮ ನಮಗಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

'ಇಂಗ್ಲಿಷ್‌ ಬಾರದೆಂಬ ವಿನಂತಿಯೋ ಅಥವಾ ಹಿಂದಿ ಹೇರಬೇಕೆಂಬ ನಾಚಿಕೆ ಇಲ್ಲದ ಉತ್ಸಾಹವೋ'?

ನಂಗೆ ಹಿಂದಿ ಬರಲ್ಲ ಹೋಗ್ರಪ್ಪ: ರೈ ಟೀಶರ್ಟ್‌

ನಟ ಪ್ರಕಾಶ್‌ ರೈ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರೆದಿರುವ ಟೀಶರ್ಟ್‌ ಧರಿಸುವ ಮೂಲಕ ಹಿಂದಿ ಹೇರಿಕೆ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ‘ಹಲವು ಭಾಷೆ ಬಲ್ಲೆ.. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ, ನನ್ನ ಗ್ರಹಿಕೆ, ನನ್ನ ಬೇರು, ನನ್ನ ಶಕ್ತಿ, ನನ್ನ ಹೆಮ್ಮೆ, ನನ್ನ ಮಾತೃಭಾಷೆ ಕನ್ನಡ. ಹಿಂದಿ ಹೇರಿಕೆ‰ ಬೇಡ’ ಎಂದು ಅವರು ಹೇಳಿದ್ದಾರೆ. ಆ ದಿನಗಳು ಖ್ಯಾತಿಯ ನಟ ಚೇತನ್‌, ‘ಹಿಂದಿ ಗೊತ್ತಿಲ್ಲ ಹೋಗೋ, ನಾನು ಕನ್ನಡಿಗ’ ಎಂದು ಬರೆದಿದ್ದ ಟೀಶರ್ಟ್‌ ಧರಿಸಿ ತಮ್ಮ ಪ್ರತಿಭಟನೆ ಸೂಚಿಸಿದ್ದರು.