ಸಾರ್ವತ್ರಿಕ ಚುನಾವಣೆಯಲ್ಲಿ ಆನ್‌ಲೈನ್‌ ವೋಟಿಂಗ್ ಇಲ್ಲ ಸಂಸತ್‌ಗೆ ಕಾನೂನು ಸಚಿವ ಕಿರೆನ್‌ ರಿಜಿಜು ಉತ್ತರ ರಾಜಸ್ತಾನದ ಸಂಸದ ದುಷ್ಯಂತ್ ಸಿಂಗ್‌ ಪ್ರಶ್ನೆ ಕೇಳಿದ್ದರು.

ನವದೆಹಲಿ(ಡಿ.3)ಸಾರ್ವತ್ರಿಕ ಚುನಾವಣೆಯಲ್ಲಿ ಇ ವೋಟಿಂಗ್‌ ನಡೆಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಹೇಳಿದ್ದಾರೆ. ರಾಜಸ್ತಾನದ ಸಂಸತ್‌ ಸದಸ್ಯ ದುಶ್ಯಂತ್‌ ಸಿಂಗ್‌ ಅವರು ಕೇಳಿದ ಪ್ರಶ್ನೆಗೆ ಸಂಸತ್‌ನಲ್ಲಿ ಅವರು ಲಿಖಿತ ಉತ್ತರ ನೀಡಿದರು. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಆನ್ಲೈನ್‌ ಮೂಲಕ ಮತದಾನ ನಡೆಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪಗಳು ಭಾರತದ ಚುನಾವಣಾ ಆಯೋಗದಿಂದ ಬಂದಿಲ್ಲ ಎಂದು ಸಂಸತ್‌ನಲ್ಲಿ ಕಾನೂನು ಸಚಿವ ಕಿರೆನ್‌ ರಿಜಿಜು ಉತ್ತರಿಸಿದರು. 

ಸಂಸತ್‌ನ ಚಳಿಗಾಲದ ಅಧಿವೇಶನದ 5ನೇ ದಿನವಾದ ಇಂದು ರಾಜಸ್ಥಾನದ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಅವರು ಕೇಳಿದ ಈ ಪ್ರಶ್ನೆಗೆ ರಿಜಿಜು ಉತ್ತರಿಸಿದರು. ತೆಲಂಗಾಣದಲ್ಲಿ ಫೋನ್-ಆಪ್ ಆಧಾರಿತ ಮತದಾನದ ಕುರಿತ ಪ್ರಯೋಗದ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿದಿದೆಯೇ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಇ-ಮತದಾನವನ್ನು ಪರಿಚಯಿಸುವ ಯಾವುದೇ ಪ್ರಸ್ತಾವನೆಯನ್ನು ಅದು ಸ್ವೀಕರಿಸಿದೆಯೇ ಎಂದು ಸಿಂಗ್ ತಮ್ಮ ಪ್ರಶ್ನೆಯಲ್ಲಿ ಕೇಳಿದ್ದಾರೆ.

ಕೆಲ ಕ್ರೀಡಾ ಒಕ್ಕೂಟಗಳು ಅಥ್ಲೀಟ್‌ಗಳನ್ನು ಬೆಳೆಯಲು ಬಿಡುತ್ತಿಲ್ಲ : ವಾಸ್ತವ ಬಿಚ್ಚಿಟ್ಟ ಕಿರಣ್ ರಿಜಿಜು

ಅಂತಹ ಯಾವುದೇ ಪ್ರಸ್ತಾಪವನ್ನು ಭಾರತೀಯ ಚುನಾವಣಾ ಆಯೋಗದಿಂದ ಸ್ವೀಕರಿಸಲಾಗಿಲ್ಲ ಮತ್ತು ಆದ್ದರಿಂದ, ಇದಕ್ಕಾಗಿ ಸಂಪನ್ಮೂಲ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ರಿಜಿಯು ಉತ್ತರದಲ್ಲಿ ತಿಳಿಸಿದ್ದಾರೆ. ವಿದೇಶಗಳಲ್ಲಿ ಚುನಾವಣೆ ನಡೆಸಲು ಬಳಸುವ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಕೆಯ ಬಗ್ಗೆ ಇಸಿಐ ಬಳಿ ಯಾವುದೇ ಮಾಹಿತಿ ಇಲ್ಲ ಎಂದು ಸಹ ಉಲ್ಲೇಖಿಸಲಾಗಿದೆ.

ನಾಗರಿಕರು ವಾಸ್ತವಿಕವಾಗಿ ತಮ್ಮ ಮತವನ್ನು ಚಲಾಯಿಸಲು ಅನುವು ಮಾಡಿಕೊಡುವ "ಸುರಕ್ಷಿತ ರಿಮೋಟ್ ಎಲೆಕ್ಟ್ರಾನಿಕ್ ವೋಟಿಂಗ್ ಸಿಸ್ಟಮ್" ಮೂಲಕ ಇ-ವೋಟಿಂಗ್ ಅನ್ನು ಪರಿಚಯಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಯೊಂದು ಬಾಕಿ ಉಳಿದಿದೆ. ಆಧುನಿಕ ಕಾಲ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ಚುನಾವಣಾ ಕಾನೂನನ್ನು ತರಬೇಕಾಗಿದೆ ಎಂದು ಕೇರಳ ಮೂಲದ ಕೆ ಸತ್ಯನ್ ಅವರು ವಕೀಲ ಕಾಳೀಶ್ವರಂ ರಾಜ್ ಮೂಲಕ ಇ ವೋಟಿಂಗ್‌ಗೆ ಸಂಬಂಧಿಸಿದಂತೆ ಅರ್ಜಿ ಯೊಂದನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದರು. 

ಕಾನೂನು ಸಚಿವ ರಿಜಿಜು ಡಾನ್ಸ್‌ಗೆ ಸಿಜೆಐ ರಮಣ ಶ್ಲಾಘನೆ!

ಕೇಂದ್ರ ಡೇಟಾಬೇಸ್ ಮತ್ತು ಸ್ಥಳೀಯ ಡೇಟಾಬೇಸ್‌ನಂತಹ ವಹಿವಾಟುಗಳಿಗೆ ಡಬಲ್ ಡೇಟಾಬೇಸ್‌ಗಳನ್ನು ಒದಗಿಸುವ ಮೂಲಕ ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ಈ ಅರ್ಜಿಯಲ್ಲಿ ನಿರ್ದೇಶಿಸಲಾಗಿತ್ತು. ಅಲ್ಲದೇ ಮತದಾರರನ್ನು ದೋಷಮುಕ್ತವಾಗಿ ಗುರುತಿಸಲು ಒಟಿಪಿ ಆಧಾರಿತ ವ್ಯವಸ್ಥೆಯನ್ನು ವಿಕಸನಗೊಳಿಸಬೇಕು ಮತ್ತು ದೇಶಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಬೇಕೆಂದು ಮನವಿಯಲ್ಲಿ ಕೋರಲಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು.