ಕೇಂದ್ರ ಸರ್ಕಾರದ ಮುಂದೆ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ. ಬದಲಾಗಿ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸಂಸತ್ತಿಗೆ ಮಾಹಿತಿ ನೀಡಿದರು.

ನವದೆಹಲಿ: ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತಿಗೆ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭೆಯಲ್ಲಿ ಮಾತನಾಡಿದ ಅವರು, ಆದರೆ, ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೂಲಕ ಸಕಾಲದಲ್ಲಿ 3 ಲಕ್ಷವರೆಗೆ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಸಕಾಲದಲ್ಲಿ ಈ ಸಾಲಮರುಪಾವತಿಸಿದರೆ ಹೆಚ್ಚುವರಿ ಪ್ರೋತ್ಸಾಹಕಗಳಿಗೂ ರೈತರು ಅರ್ಹರಾಗುತ್ತಾರೆ ಎಂದು ಹೇಳಿದರು.

ಭದ್ರತೆ ರಹಿತ ಅಲ್ಪಾವಧಿ ಸಾಲ ಏರಿಕೆ

ಇನ್ನು ಭದ್ರತೆ ರಹಿತ ಅಲ್ಪಾವಧಿ ಸಾಲವನ್ನು 1.60 ಲಕ್ಷದಿಂದ 2 ಲಕ್ಷ ರು.ಗೆ ಹೆಚ್ಚಿಸಲಾಗಿದೆ. ಪಶುಸಂಗೋಪನೆಯಂಥ ಕೃಷಿಗೆ ಪೂರಕವಾದ ಚಟುವಟಿಗಳಿಗೂ ಇದು ಅನ್ವಯವಾಗುತ್ತದೆ. ಕೃಷಿ ಸೇರಿ ಆರ್ಥಿಕತೆಯ ಆದ್ಯತಾ ಕ್ಷೇತ್ರಗಳಿಗೆ ಆರ್‌ಬಿಐನ ಆದ್ಯತಾ ಕ್ಷೇತ್ರದ ಸಾಲದ ಮಾರ್ಗಸೂಚಿ ಅನ್ವಯ ಬ್ಯಾಂಕಿಂಗ್‌ ವ್ಯವಸ್ಥೆ ಮೂಲಕ ಅಗತ್ಯ ಹಣದ ಹರಿವು ಆಗುತ್ತಿರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಇದರ ಜತೆಗೆ ಸರ್ಕಾರವು ಬೆಳೆ ವಿಮೆ ಮತ್ತು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ ರೈತರಿಗೆ ನೇರವಾಗಿ ಹಣವನ್ನೂ ವರ್ಗಾವಣೆ ಮಾಡುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದು ಲೋಕಸಭೆಗೆ ಮಾಹಿತಿ ನೀಡಿದರು.