ನೂಪುರ್ ಶರ್ಮಾ ಬಳಿ ಕ್ಷಮೆ ಕೇಳುವ ಮಂದಿ ಝಾಕಿರ್ ಬಳಿ ಯಾಕೆ ಕೇಳಿಲ್ಲ? ಬಿಜೆಪಿ ನಾಯಕಿ ಬೆಂಬಲಕ್ಕೆ ಠಾಕ್ರೆ!
ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ವಿರುದ್ಧ ದಂಗೆ, ಗಲಭೆ, ಪ್ರತಿಭಟನೆ, ಹತ್ಯೆಗಳು ನಡೆದಿದೆ. ಇದೀಗ ಎಂಎನ್ಎಸ್ ನಾಯಕ ರಾಜ್ ಠಾಕ್ರೆ ನೂಪುರ್ ಬೆಂಬಲಕ್ಕೆ ನಿಂತಿದ್ದಾರೆ. ಝಾಕಿರ್ ನಾಯ್ಕ್ ಬಳಿ ಕ್ಷಮೇ ಕೇಳಿಲ್ಲ ಯಾಕೆ ಎಂದು ನೂಪುರ್ ವಿರುದ್ಧ ಪ್ರತಿಭಟಿಸುವವರನ್ನು ಪ್ರಶ್ನಿಸಿದ್ದಾರೆ.
ಮುಂಬೈ(ಆ.23): ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದಾರೆ ಅನ್ನೋ ಆರೋಪದಡಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ಭಾರಿ ಸುದ್ದಿಯಾಗಿದ್ದಾರೆ. ಈ ಹೇಳಿಕೆಯಿಂದ ಭಾರತದಲ್ಲಿ ಗಲಭೆ, ಹತ್ಯೆ, ಕೋಮುಸಂಘರ್ಷಗಳೇ ನಡೆದು ಹೋಗಿದೆ. ಪರಿಸ್ಥಿತಿ ಇನ್ನೂ ತಣ್ಣಗಾಗಿಲ್ಲ. ನೂಪುರ್ ಶರ್ಮಾ ಕ್ಷಮೆ ಕೇಳಬೇಕು ಅನ್ನೋ ಆಗ್ರಹವೂ ಕಡಿಮೆಯಾಗಿಲ್ಲ. ಇದರ ನಡುವೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ನೂಪುರ್ ಶರ್ಮಾ ಬೆಂಬಲಕ್ಕೆ ನಿಂತಿದ್ದಾರೆ. ಭಾರತದಿಂದ ಪರಾರಿಯಾಗಿರುವ ಇಸ್ಲಾಮಿಕ್ ನಾಯಕ ಝಾಕಿರ್ ನಾಯ್ಕ್ ಈ ಹಿಂದೆ ಪ್ರವಾದಿ ಮೊಹಮ್ಮದ್ ಕುರಿತು ಹೇಳಿರುವ ಮಾತುಗಳನ್ನೇ ನೂಪುರ್ ಶರ್ಮಾ ಆಡಿದ್ದಾರೆ. ಆದರೆ ಝಾಕಿರ್ ನಾಯ್ಕ್ ಬಳಿ ಯಾರೂ ಕ್ಷಮೇ ಕೇಳಿಲ್ಲ. ಅಂದು ಝಾಕಿರ್ ಹೇಳಿಕೆಯನ್ನು ಬೆಂಬಲಿಸಿದ್ದ ಮಂದಿ ಇದೀಗ ನೂಪುರ್ ಹೇಳಿಕೆಯನ್ನು ವಿರೋಧಿಸುತ್ತಿರುವುದೇಕೆ? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
AIMIM ಶಾಸಕ ಅಕ್ಬರುದ್ದೀನ್ ಓವೈಸಿ ಹಲವು ಬಾರಿ ಹಿಂದೂ ದೇವತೆಗಳನ್ನು ಅವಹೇಳನ ಮಾಡಿದ್ದಾರೆ. ಧರ್ಮನಿಂಧನೆ ಮಾಡಿದ್ದಾರೆ. ಹಿಂದೂಗಳ ಭಾವನೆ, ನಂಬಿಕೆ ಹಾಗೂ ಭಕ್ತಿಯನ್ನೇ ಪ್ರಶ್ನಿಸಿದ್ದಾರೆ. ಆದರೆ ಈ ಕಾರಣಕ್ಕಾಗಿ ಹಿಂದೂಗಳು ಇಡೀ ಭಾರತದಲ್ಲಿ ಗಲಭೆ ಸೃಷ್ಟಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಈ ಹೆಸರಿನಲ್ಲಿ ಯಾರ ಹತ್ಯೆಯನ್ನು ಹಿಂದೂಗಳು ಮಾಡಿಲ್ಲ. ಯಾರನ್ನೂ ಟಾರ್ಗೆಟ್ ಮಾಡಿಲ್ಲ. ದೇಶದಲ್ಲಿ ಕೋಮು ಸಂಘರ್ಷ ಸೃಷ್ಟಿಸಿಲ್ಲ. ಹಿಂದೂಗಳು ಈ ನೆಲದ ಕಾನೂನು ಗೌರವಿಸಿ ದೂರು ನೀಡಿದ್ದಾರೆ. ಉಳಿದಿದ್ದು ಕಾನೂನಿಗೆ ಬಿಟ್ಟಿದ್ದು. ಆದರೆ ನೂಪುರ್ ವಿಚಾರದಲ್ಲಿ ಮುಸ್ಲಿಮರು ಮಾಡಿದ್ದೇನು? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.
ನೂಪುರ್ ಶರ್ಮ ವಿರುದ್ಧ ಸೇಡು ತೀರಿಸಿಕೊಳ್ತೇವೆ, ಅಲ್‌ಖೈದಾ ನೇರ ಎಚ್ಚರಿಕೆ!
ನೂಪುರ್ ಶರ್ಮಾ ವಿಚಾರವಾಗಿ ಈಗಲೂ ಹಲವರನ್ನು ಟಾರ್ಗೆಟ್ ಮಾಡಲಾಗಿದೆ. ನೂಪುರ್ ಬೆಂಬಲಿಸಿದ ಕೆಲವರು ಹತ್ಯೆಯಾಗಿದ್ದಾರೆ. ಹಲವರು ಟಾರ್ಗೆಟ್ ಆಗಿದ್ದಾರೆ. ಈಗಲೂ ನೂಪುರ್ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಿದೆ. ದೂರು ದಾಖಲಿಸಿದ ಬಳಿಕ ಈ ದೇಶದಲ್ಲಿ ಒಂದು ವ್ಯವಸ್ಥೆ ಇದೆ. ಕಾನೂನು, ಪೊಲೀಸರು, ನ್ಯಾಯ ಎಲ್ಲವೂ ಇದೆ. ಅದು ಕಾರ್ಯನಿರ್ವಹಿಸುತ್ತದೆ. ಆದರೆ ಮುಸ್ಲಿಮರು ಸುಖಾಸುಮ್ಮನೆ ಅಮಾಯಕರ ಹತ್ಯೆ ಮಾಡುತ್ತಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಒಂದು ನ್ಯಾಯ, ಹಿಂದೂಗಳಿಗೆ ಒಂದು ನ್ಯಾಯ ಹೇಗೆ ಸಾಧ್ಯ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ನೂಪುರ್ ವಿಚಾರದ ಜೊತೆ ಸಹೋದರ ಉದ್ಧವ್ ಠಾಕ್ರೆ ರಾಜಕೀಯ ಕುರಿತು ಮಾತನಾಡಿದ್ದಾರೆ. ಮುಖ್ಯಮಂತ್ರಿಯಾಗಲು ಬಿಜೆಪಿ ಜೊತೆಗಿನ ಮೈತ್ರಿ ಮುರಿದು ವಿರುದ್ಧದ ದಿಕ್ಕಿನಲ್ಲಿ ಸಾಗುವ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲ. ತಂದೆ ಬಾಳಾ ಸಾಹೇಬ್ ಠಾಕ್ರೆ ಆಶಯದಂತೆ ಉದ್ಧವ್ ಠಾಕ್ರೆ ನಡೆದುಕೊಂಡಿಲ್ಲ ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಈ ಕಾರಣಕ್ಕೆ ಮೈತ್ರಿ ಮುರಿದು ಬಿದ್ದಿದೆ ಎಂದಿದ್ದಾರೆ.
ನೂಪುರ್ ಶರ್ಮಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್!