ಪುಣೆ (ಡಿ.27): ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ ರೂಪಾಂತರಗೊಂಡು ಅತಿ ವೇಗವಾಗಿ ಹರಡುತ್ತಿರುವುದು ಆತಂಕ ಮೂಡಿಸಿದೆ. ಆದರೆ, ಕೊರೋನಾ ವೈರಸ್‌ ಈಗಾಗಲೇ ಹಲವಾರು ರೂಪಾಂತರಗಳನ್ನು ಕಂಡಿದ್ದು, ತಿಂಗಳಿಗೆ ಸರಾಸರಿ ಎರಡು ಬಾರಿ ರೂಪಾಂತರಗೊಂಡಿದೆ. ಈ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದು ದೆಹಲಿ ಏಮ್ಸ್‌ ನಿರ್ದೇಶಕ ಮತ್ತು ಕೊರೋನಾ ನಿಯಂತ್ರಣ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯ ಡಾ.ರಣದೀಪ್‌ ಗುಲೇರಿಯಾ ಹೇಳಿದ್ದಾರೆ.

ಕೊರೋನಾ ವೈರಸ್‌ ರೂಪಾಂತರಗೊಂಡರೂ ರೋಗ ಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿರುವ ಹಾಗೂ ತುರ್ತು ಬಳಕೆಗೆ ಅನುಮತಿ ನೀಡಲು ಉದ್ದೇಶಿಸಿರುವ ಲಸಿಕೆಗಳು ಹೊಸ ಕೊರೋನಾ ವೈರಸ್‌ ಮೇಲೆ ಕೂಡ ಪರಿಣಾಮ ಬೀರಲಿವೆ ಎಂದು ತಿಳಿಸಿದ್ದಾರೆ.

6 ತಿಂಗಳಲ್ಲಿ ನಿನ್ನೆಯೇ ಕಡಿಮೆ ಸಾವು ದಾಖಲು

ಕೊರೋನಾ ಹೊಸ ಮಾದರಿಯಿಂದ ಸೋಂಕು ವೇಗವಾಗಿ ಹರಡುತ್ತಿದೆ ಎಂಬ ಕಾರಣಕ್ಕೆ ಅದನ್ನು ಅಪಾಯಕಾರಿ ಎಂದು ಬಿಂಬಿಸಲಾಗಿದೆ. ಆದರೆ, ಈ ಸೋಂಕಿಗೆ ತುತ್ತಾದವರು ಎಲ್ಲರೂ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯವಿಲ್ಲ. ಅಲ್ಲದೇ ಹೊಸ ವೈರಸ್‌ನಿಂದ ಹೆಚ್ಚು ಸಾವು ಸಂಭವಿಸುತ್ತಿದೆ ಎಂಬುದು ಕೂಡ ನಿಜವಲ್ಲ. ಕಳೆದ 10 ತಿಂಗಳಿನಲ್ಲಿ ಕೊರೋನಾ ವೈರಸ್‌ ಹಲವಾರು ರೂಪಾಂತರಗಳನ್ನು ಕಂಡಿದೆ. ಇಂತಹ ಪರಿವರ್ತನೆ ಸರ್ವೇ ಸಾಮಾನ್ಯ. ಒಂದು ವೇಳೆ ವೈರಸ್‌ನಲ್ಲಿ ದೊಡ್ಟಮಟ್ಟದ ಬದಲಾವಣೆಯಾದರೆ ಲಸಿಕೆ ತಯಾರಿಕಾ ಕಂಪನಿಗಳು ಮಾರ್ಪಾಟು ಮಾಡಿ ಪರಿಣಾಮಕಾರಿಯಾದ ಲಸಿಕೆಯನ್ನು ಹೊರತರುವುದಕ್ಕೆ ಸಾಧ್ಯವಿದೆ. ಸದ್ಯ ವೈರಸ್‌ನಲ್ಲಿ ಅಂತಹ ಮಹತ್ವದ ಬದಲಾವಣೆಗಳು ಆದಂತೆ ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ದೇಶದಲ್ಲಿ ಈಗ ಕೊರೋನಾ ವೈರಸ್‌ ಇಳಿಕೆಯ ಹಂತದಲ್ಲಿ ಇದ್ದು, ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಮಟ್ಟಿಗೆ ಮುಂದಿನ 6ರಿಂದ 8 ತಿಂಗಳು ಅತ್ಯಂತ ಮಹತ್ವದ್ದಾಗಿದೆ ಎಂದು ಗುಲೇರಿಯಾ ಹೇಳಿದ್ದಾರೆ.

ಬ್ರಿಟನ್ನಿಂದ ರಾಜ್ಯಕ್ಕೆ ಬಂದ ಮತ್ತೆ 9 ಜನಕ್ಕೆ ಸೋಂಕು
ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ವಾಪಸ್ಸಾದವರಲ್ಲಿ ಮತ್ತೆ ಒಂಬತ್ತು ಮಂದಿಗೆ ಶನಿವಾರ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

"

ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿದ್ದವರ ಪೈಕಿ ಶನಿವಾರ 15 ಜನರನ್ನು ಮಾತ್ರ ಪತ್ತೆ ಹಚ್ಚಿ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ ಮೂವರು ಸೇರಿ ಒಟ್ಟು 9 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು 6 ಜನರ ವರದಿ ಬಾಕಿ ಇದೆ. ಇದರೊಂದಿಗೆ ಸೋಂಕು ದೃಢಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಸೋಂಕು ದೃಢಪಟ್ಟಎಲ್ಲರ ಗಂಟಲು ದ್ರವದ ಮಾದರಿಯನ್ನು ರೂಪಾಂತರಿ ವೈರಾಣು ಪತ್ತೆಗೆ ನಡೆಸುವ ವಂಶವಾಹಿ ಪರೀಕ್ಷೆಗೆ ನಿಮ್ಹಾನ್ಸ್‌ ಮತ್ತು ನ್ಯಾಷನಲ್‌ ಸೈನ್ಸ್‌ ಆಫ್‌ ಬಯಾಲಜಿಕಲ್‌ ಸೈನ್ಸಸ್‌ಗೆ(ಎನ್‌ಸಿಬಿಎಸ್‌) ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್‌ನಿಂದ ಕಣ್ಮರೆಯಾದವರಿಗೆ ತಲಾಶ್

ಬ್ರಿಟನ್‌ನಿಂದ ರಾಜ್ಯಕ್ಕೆ ಒಟ್ಟು 2127 ಜನರು ಬಂದಿದ್ದು, ಈ ಪೈಕಿ ಶನಿವಾರದ ವರೆಗೆ 1434 ಜನರನ್ನು ಮಾತ್ರ ಪತ್ತೆ ಹಚ್ಚಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಉಳಿದ 693 ಮಂದಿ ಇದುವರೆಗೂ ಪತ್ತೆಯಾಗಿಲ್ಲ. ಇನ್ನು ಕೋವಿಡ್‌ ಪರೀಕ್ಷೆ ನಡೆಸಿರುವ 1434ರಲ್ಲಿ 931 ಜನರ ವರದಿ ಬಂದಿದ್ದು 23 ಜನರಿಗೆ ಪಾಸಿಟಿವ್‌, 908 ಜನರಿಗೆ ನೆಗೆಟಿವ್‌ ವರದಿ ಬಂದಿದೆ. ಉಳಿದ 503 ಜನರ ವರದಿ ಬರಬೇಕಿದೆ.