ಕೊರೋನಾ: ಡಿ.26ಕ್ಕೆ 300ಕ್ಕಿಂತ ಕಮ್ಮಿ ಸಾವು: 6 ತಿಂಗಳಲ್ಲೇ ಮೊದಲು
ಕೊರೋನಾಗೆ ನಿನ್ನೆ 300ಕ್ಕಿಂತ ಕಮ್ಮಿ, ಸಾವು: 6 ತಿಂಗಳಲ್ಲೇ ಮೊದಲು, - 251ಕ್ಕೆ ಕುಸಿದ ದೈನಂದಿನ ಸಾವಿನ ಸಂಖ್ಯೆ
ನವದೆಹಲಿ (ಡಿ.27): ಹೊಸ ಮಾದರಿಯ ಕೊರೋನಾ ವೈರಸ್‌ನಿಂದ ಆತಂಕದ ಸ್ಥಿತಿ ನಿರ್ಮಾಣವಾಗಿರುವಾಗಲೇ, ಈ ಮಾರಕ ವೈರಾಣುವಿನಿಂದ ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳ ಸಂಖ್ಯೆಯಲ್ಲಿ ಮತ್ತಷ್ಟುಇಳಿಕೆ ಕಂಡುಬಂದಿದೆ. ಶನಿವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 251 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದಿನವೊಂದರಲ್ಲಿ 300ಕ್ಕಿಂತ ಕಡಿಮೆ ಸಾವು ವರದಿಯಾಗುತ್ತಿರುವುದು 6 ತಿಂಗಳ ಬಳಿಕ ಇದೇ ಮೊದಲು.
251 ಹೊಸ ಸಾವಿನೊಂದಿಗೆ ಕೊರೋನಾ ವೈರಸ್‌ಗೆ ದೇಶದಲ್ಲಿ ಈವರೆಗೆ ಬಲಿಯಾದವರ ಸಂಖ್ಯೆ 1,47,343ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ, 22,273 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ದೈನಂದಿನ ಸೋಂಕಿತರ ಸಂಖ್ಯೆ 25 ಸಾವಿರಕ್ಕಿಂತ ಕಡಿಮೆ ಇರುವುದು ಇದು ಸತತ 9ನೇ ದಿನ ಎಂಬುದು ಗಮನಾರ್ಹ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,01,69,118ಕ್ಕೆ ಏರಿಕೆಯಾಗಿದೆ.
ಬ್ರಿಟನ್‌ನಿಂದ ಬಂದು ಕಣ್ಮರೆಯಾದವರಿಗೆ ಪೊಲೀಸರ ಹುಡುಕಾಟ
ವೈರಸ್ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 97,40,108ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಗುಣಮುಖ ಪ್ರಮಾಣ ಶೇ.95.78ಕ್ಕೆ ಹೆಚ್ಚಳವಾಗಿದೆ. ಸಕ್ರಿಯ ಕೊರೋನಾಪೀಡಿತರ ಸಂಖ್ಯೆ 2,81,667ರಷ್ಟಿದೆ. ಈ ಮೂಲಕ ಸಕ್ರಿಯ ಕೊರೋನಾಪೀಡಿತರ ಸಂಖ್ಯೆ ಸತತ ಐದನೇ ದಿನವೂ 3 ಲಕ್ಷಕ್ಕಿಂತ ಕಡಿಮೆ ಇದೆ.