ಎಷ್ಟೇ ಪ್ರಭಾವಿಗಳಿರಲಿ; ಭ್ರಷ್ಟರನ್ನು ಸದೆಬಡಿಯಿರಿ: ನರೇಂದ್ರ ಮೋದಿ
- ಭ್ರಷ್ಟರನ್ನು ಸದೆಬಡಿಯಿರಿ: ಮೋದಿ
- ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಬೇಡಿ
- ಹೀಯಾಳಿಸಿದರೆ ತಲೆಕೆಡಿಸಿಕೊಳ್ಳಬೇಡಿ: ಪ್ರಧಾನಿ
- ಭ್ರಷ್ಟರ ಗುಣಗಾನಕ್ಕೆ ಮೋದಿ ಆಕ್ಷೇಪ
ನವದೆಹಲಿ (ನ.4): ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ವಿರುದ್ಧ ಏನೇ ಚೀರಾಡಿದರೂ, ನಿಮ್ಮ ವಿರುದ್ಧ ಏನೇ ಅಪ್ರಚಾರ ಮಾಡಿದರೂ ಎದೆಗುಂದದೆ ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ಅವರನ್ನು ಸುಮ್ಮನೆ ಬಿಡಬೇಡಿ ಎಂದು ತನಿಖಾ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.
ನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟಅಧಿಕಾರಿಯಾಗಲಾರೆ: ಸರ್ಕಾರಿ ಕಚೇರಿಗಳಲ್ಲಿ ಬೋರ್ಡ್ ಹಾಕಲು ಆದೇಶ
ಭ್ರಷ್ಟರು ಎಷ್ಟೇ ಶಕ್ತಿಶಾಲಿಗಳಾಗಿದ್ದರೂ ಚಿಂತೆ ಇಲ್ಲ, ಅವರು ಕೈತಪ್ಪದಂತೆ ನೋಡಿಕೊಳ್ಳಿ. ನಿಮ್ಮನ್ನು ಹೀಯಾಳಿಸಿದರು, ದೂಷಿಸಿದರು ಎಂಬ ಕಾರಣಕ್ಕೆ ರಕ್ಷಣಾತ್ಮಕವಾಗಿ ವರ್ತಿಸಬೇಡಿ. ಯಾವುದೇ ಭ್ರಷ್ಟವ್ಯಕ್ತಿ ರಾಜಕೀಯವಾಗಿ ಅಥವಾ ಸಾಮಾಜಿಕವಾಗಿ ರಕ್ಷಣೆ ಪಡೆಯದಂತೆ ನೋಡಿಕೊಳ್ಳುವುದು ಕೇಂದ್ರೀಯ ವಿಚಕ್ಷಣಾ ದಳ (ಸಿವಿಸಿ)ದಂಥ ಸಂಸ್ಥೆಗಳ ಹೊಣೆಗಾರಿಕೆ ಎಂದು ಪ್ರಧಾನಿ ಹೇಳಿದ್ದಾರೆ.
ಕೇಂದ್ರ ಸರ್ಕಾರ, ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಈ ಸೂಚನೆ ಸಾಕಷ್ಟುಮಹತ್ವ ಪಡೆದುಕೊಂಡಿದೆ. ಜೊತೆಗೆ ಭ್ರಷ್ಟಾಚಾರ ನಿಗ್ರಹಿಸುವ ಸಂಸ್ಥೆಗಳಿಗೆ ಸಂಪೂರ್ಣ ಬೆಂಬಲ ಘೋಷಿಸುವ ಮೂಲಕ ಅವುಗಳ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಮೋದಿ ಮಾಡಿದ್ದಾರೆ.
ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ಗುರುವಾರ ಇಲ್ಲಿ ಆಯೋಜಿಸಿದ ‘ವಿಚಕ್ಷಣಾ ಜಾಗೃತಿ ಸಪ್ತಾಹ’ದಲ್ಲಿ ಮಾತನಾಡಿದ ಪ್ರಧಾನಿ, ‘ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಗೂ ರಾಜಕೀಯ ಅಥವಾ ಸಾಮಾಜಿಕ ಆಶ್ರಯ ಸಿಗದಂತೆ ನೋಡಿಕೊಳ್ಳುವುದು ಸಿವಿಸಿಯ ಜವಾಬ್ದಾರಿಯಾಗಿದೆ. ಪ್ರತಿ ಭ್ರಷ್ಟವ್ಯಕ್ತಿಯನ್ನೂ ಸಮಾಜ ಹೊಣೆಗಾರರನ್ನಾಗಿ ಮಾಡಬೇಕು. ಅಂಥ ವಾತಾವರಣ ನಿರ್ಮಿಸುವುದು ಅತ್ಯಂತ ಅಗತ್ಯ. ಈಗಾಗಲೇ ಭ್ರಷ್ಟರು ಎಂದು ಸಾಬೀತಾದವರ ಗುಣಗಾನ ಮಾಡುತ್ತಿರುವ ಘಟನೆಗಳನ್ನು ನಾವು ನೋಡುತ್ತಿದ್ದೇವೆ. ತಮ್ಮನ್ನು ತಾವು ಪ್ರಾಮಾಣಿಕ ಎಂದು ಕರೆದುಕೊಳ್ಳುವವರೂ ಕೂಡ ಭ್ರಷ್ಟರೊಂದಿಗೆ ನಿಂತು ನಾಚಿಕೆಯಿಲ್ಲದೆ ಫೋಟೋ ಹೊಡೆಸಿಕೊಳ್ಳುತ್ತಾರೆ. ಭ್ರಷ್ಟಾಚಾರಿಗಳಿಗೆ ಬಹಿರಂಗ ಬೆಂಬಲ ಸೂಚಿಸುತ್ತಾರೆ’ ಎಂದು ಕಿಡಿಕಾರಿದರು.
ಅಲ್ಲದೇ ‘ಭ್ರಷ್ಟಾಚಾರದ ವಿರುದ್ಧ ಕಾರ್ಯಾಚರಣೆ ನಡೆಸುವ ಸಂಸ್ಥೆಗಳು ರಕ್ಷಣಾತ್ಮಕವಾಗಿರಬೇಕಾಗಿಲ್ಲ, ನೀವು ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವಾಗ ಯಾವುದೇ ಪಾಪಪ್ರಜ್ಞೆಯಲ್ಲಿ ಬದುಕಬೇಕಾಗಿಲ್ಲ. ನಿಮ್ಮ ಕೆಲಸ ನಿಷ್ಠೆಯಿಂದ ಮಾಡಿದರೆ ಸಮಾಜ ನಿಮ್ಮೊಂದಿಗಿರುತ್ತದೆ’ ಎಂದರು.
‘ನಾವು ರಾಜಕೀಯ ಕಾರ್ಯಸೂಚಿ ಇಟ್ಟುಕೊಂಡು ಕೆಲಸ ಮಾಡಬೇಕಿಲ್ಲ. ಆದರೆ ದೇಶದ ಜನಸಾಮಾನ್ಯರು ಅನುಭವಿಸುತ್ತಿರುವ ಕಷ್ಟಗಳನ್ನು ನಿವಾರಿಸುವುದು ನಮ್ಮ ಕರ್ತವ್ಯ. ಇಂಥ ವೇಳೆ ಪಟ್ಟಭದ್ರ ಹಿತಾಸಕ್ತಿಯುಳ್ಳ ವ್ಯಕ್ತಿಗಳು ತನಿಖಾ ಸಂಸ್ಥೆಗಳ ಕತ್ತುಹಿಸುಕುವ, ಇಂಥ ಸಂಸ್ಥೆಗಳಲ್ಲಿ ಕುಳಿತ ವ್ಯಕ್ತಿಗಳ ವಿರುದ್ಧ ಸುಳ್ಳು ಆರೋಪ ಹೊರಿಸುವ ಕೆಲಸ ಮಾಡುತ್ತಾರೆ. ಇವೆಲ್ಲಾ ಆಗಿಯೇ ಆಗುತ್ತವೆ. ಸರ್ಕಾರದ ಮುಖ್ಯಸ್ಥನಾಗಿ ನನ್ನ ಸುದೀರ್ಘ ಇತಿಹಾಸದಲ್ಲಿ ನಾನು ಕೂಡಾ ಇಂಥ ಕೆಸರು ಎರಚುವ, ನಿಂದಿಸುವ ಪ್ರಸಂಗಗಳನ್ನು ಸಾಕಷ್ಟುಎದುರಿಸುತ್ತಿದ್ದೇನೆ. ಆದರೆ ನೀವು ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಿದಾಗ ಜನರೂ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತಾರೆ’ ಎಂದು ಸ್ವತಃ ತಮ್ಮ ಉದಾಹರಣೆಯನ್ನೇ ಪ್ರಧಾನಿ ಮೋದಿ ನೀಡಿದರು.
ಇದೇ ವೇಳೆ, ನಮ್ಮ ಸರ್ಕಾರವು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆಯನ್ನು ಹೊಂದಿದ್ದು, ಕಳೆದ 8 ವರ್ಷಗಳಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟುಕ್ರಮ ಕೈಗೊಂಡಿದೆ ಎಂದು ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ಮೋದಿ ಆಡಳಿತದಲ್ಲಿ ಹಗರಣಗಳಿಗೆ ಅವಕಾಶವಿಲ್ಲ; ಶಾಸಕ ಅರುಣ್ ಪೂಜಾರ
ತಮ್ಮನ್ನು ತಾವು ಪ್ರಾಮಾಣಿಕ ಎಂದು ಕರೆದುಕೊಳ್ಳುವವರೂ ಭ್ರಷ್ಟರ ಜತೆ ನಿಂತು ನಾಚಿಕೆ ಇಲ್ಲದೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಬಹಿರಂಗವಾಗಿ ಭ್ರಷ್ಟಾಚಾರಿಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಭ್ರಷ್ಟರ ಗುಣಗಾನ ಮಾಡಲಾಗುತ್ತಿದೆ.
- ನರೇಂದ್ರ ಮೋದಿ ಪ್ರಧಾನಿ