* ಬೆಂಗಳೂರಿನಲ್ಲಿರುವ 72 ರೊಹಿಂಗ್ಯಾಗಳ ಗಡಿಪಾರು ತಕ್ಷಣಕ್ಕಿಲ್ಲ* ಸುಪ್ರೀಂಕೋರ್ಟ್‌ಗೆ ಕರ್ನಾಟಕ ಸರ್ಕಾರ ಮಾಹಿತಿ* ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ* ಮಯನ್ಮಾರ್‌ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ನಿರಾಶ್ರಿತರು

ನವದೆಹಲಿ:(ಅ. 27) ಬೆಂಗಳೂರಿನಲ್ಲಿ (Bengaluru) ವಾಸಮಾಡುತ್ತಿರುವ 72 ರೋಹಿಂಗ್ಯಾ (Rohingya)ನಿರಾಶ್ರಿತರನ್ನು ತಕ್ಷಣಕ್ಕೆ ಗಡಿಪಾರು (deport) ಮಾಡುವ ಯಾವುದೇ ಉದ್ದೇಶ ಇಲ್ಲ ಎಂದು ಕರ್ನಾಟಕ ಸರ್ಕಾರ (Karnataka Govt) ಸುಪ್ರೀಂಕೋರ್ಟ್‌ಗೆ (Supreme Court) ಮಾಹಿತಿ ನೀಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

72 ರೋಹಿಂಗ್ಯಾಗಳ ಗಡಿಪಾರು ಕೋರಿ ವಕೀಲ ಅಶ್ವಿನಿಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ಮಾಹಿತಿ ನೀಡಿರುವ ಕರ್ನಾಟಕ ಸರ್ಕಾರ, ತಕ್ಷಣಕ್ಕೆ ಈ ಅರ್ಜಿಯನ್ನು ಪಾಲಿಸುವುದು ಕಷ್ಟ. ರೊಹಿಂಗ್ಯಾ ನಿರಾಶ್ರಿತರು ಬೆಂಗಳೂರಿನಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇವರ ವಿರುದ್ಧ ಪೊಲೀಸರು ಯಾವುದೇ ಒತ್ತಾಯದ ಕ್ರಮಗಳನ್ನು ಕೈಗೊಂಡಿಲ್ಲ. ಅವರನ್ನು ಯಾವುದೇ ನಿರಾಶ್ರಿತ ಕೇಂದ್ರಗಳಲ್ಲಿ ಬಂಧಿಸಲಾಗಿಲ್ಲ ಹಾಗೂ ಅವರನ್ನು ಗಡಿಪಾರು ಮಾಡುವ ಕುರಿತು ಯಾವುದೇ ಯೋಜನೆಗಳನ್ನು ತಕ್ಷಣಕ್ಕೆ ರೂಪಿಸಿಲ್ಲ ಎಂದು ಅಫಿಡವಿಟ್‌ನಲ್ಲಿ ಹೇಳಿದೆ.

ರೊಹಿಂಗ್ಯಾ ನಿರಾಶ್ರಿತರ ಮಾಹಿತಿ ಕಲೆ ಹಾಕಲು ರಾಜ್ಯಗಳಿಗೆ ಕೇಂದ್ರದ ಕಟ್ಟಪ್ಪಣೆ

ಮಯನ್ಮಾರ್‌ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ನಿರಾಶ್ರಿತರು ಭಾರತದ ಬಹಳ ಕಡೆ ನೆಲೆಸಿದ್ದಾರೆ. ಇದು ದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತದೆ. ಹಾಗಾಗಿ ಅವರನ್ನು ಗುರುತಿಸಿ ಗಡಿಪಾರು ಮಾಡಬೇಕು ಎಂದು ಅಶ್ವಿನಿ ಕುಮಾರ್‌ ಸುಪ್ರಿಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ದೇಶದ ಗಡಿ ಭಾಗದಲ್ಲಿ ರೋಹಿಂಗ್ಯಾ ನಿರಾಶ್ರಿತರು ಒಳಕ್ಕೆ ಬರುತ್ತಿರುವುದು ಚರ್ಚೆಯ ವಿಷಯವಾಗಿತ್ತು. ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ನುಸುಳುಕೋರರಿಗೆ ಪಾನ್, ಆಧಾರ್, ಪಾಸ್‌ಪೋರ್ಟ್, ಪಡಿತರ ಚೀಟಿ, ಮತದಾರರ ಚೀಟಿ, ಚಾಲನಾ ಪರವಾನಗಿ ಒದಗಿಸುವ ಸರ್ಕಾರಿ ನೌಕರರು, ಟ್ರಾವೆಲ್ ಏಜೆಂಟ್‌ಗಳು ಮುಂತಾದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಕ್ರಮ ಜಾರಿ ಮಾಡಬೇಕು ಎಂದು ಕೇಳಿಕೊಳ್ಳಲಾಗಿತ್ತು.