ಕೊಚ್ಚಿ (ಅ.16): ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನದ ವಾರ್ಷಿಕ ಯಾತ್ರೆಯಿಂದ ಹಿರಿಯ ನಾಗರಿಕರು ಮತ್ತು 10 ವರ್ಷದ ಒಳಗಿನ ಮಕ್ಕಳು ಅವಕಾಶ ವಂಚಿತರಾಗುವ ಸಾಧ್ಯತೆ ದಟ್ಟವಾಗಿದೆ. ನ.16ರಿಂದ ಆರಂಭವಾಗಲಿರುವ ವಾರ್ಷಿಕ ಯಾತ್ರೆ ವೇಳೆ ಕೊರೋನಾ ನಿಯಂತ್ರಣಕ್ಕೆ ಅಗತ್ಯದ ಕ್ರಮಗಳ ವರದಿಯನ್ನು ಶಬರಿಮಲೆಯ ವಿಶೇಷ ಆಯುಕ್ತ ಎಂ. ಮನೋಜ್‌ ಅವರು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. 

ಅದರಲ್ಲಿ ಕೊರೋನಾದಿಂದ ಹೆಚ್ಚು ಬಾಧೆಗೆ ಗುರಿಯಾಗುವ ಭೀತಿ ಇರುವ ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಅವಕಾಶ ಕಲ್ಪಿಸದೇ ಇದ್ದರೆ ಸೂಕ್ತ. ಅಲ್ಲದೆ, ದೇವಸ್ಥಾನ ಸುತ್ತಮುತ್ತ ಉದ್ದದ ಸಾಲುಗಳು ಏರ್ಪಡದಂತೆ ನೋಡಿಕೊಳ್ಳಬೇಕು ಹಾಗೂ ಕೊರೋನಾ ನೆಗೆಟಿವ್‌ ವರದಿ ಹೊಂದಿದವರಿಗೆ ಮಾತ್ರವೇ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು.

ಕೊರೋನಾತಂಕ ನಡುವೆ ತೆರೆಯಲಿದೆ ಅಯ್ಯಪ್ಪ ಸ್ವಾಮಿ ದೇಗುಲ, ನಿಯಮ ಪಾಲಿಸಿದರಷ್ಟೇ ಪ್ರವೇಶ! ..

ಅಲ್ಲದೆ, ನವೆಂಬರ್‌ 16ರಿಂದ ಆರಂಭವಾಗಲಿರುವ 2 ತಿಂಗಳ ವಾರ್ಷಿಕ ಯಾತ್ರೆ ವೇಳೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಈ ವೇಳೆ ಭಕ್ತರನ್ನು ನಿಯಂತ್ರಿಸುವುದು ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿರುವ ಹೋಟೆಲ್‌ಗಳು, ಅಂಗಡಿಗಳು ಸೇರಿದಂತೆ ಇನ್ನಿತರ ಪ್ರದೇಶವನ್ನು ಶುಚಿಯಾಗಿಡಬೇಕು ಎಂಬ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.