ದ್ವಿಭಾಷಾ ಸೂತ್ರ: ಕನ್ನಡಕ್ಕೊಂದು ನ್ಯಾಯ, ತಮಿಳಿಗೊಂದು ನ್ಯಾಯ!| ಮೋದಿ ತ.ನಾಡು ಕಾರ್ಯಕ್ರಮ ಸಂಪೂರ್ಣ ತಮಿಳುಮಯ| ಕರ್ನಾಟಕಕ್ಕಿರುವ ದ್ವಿಭಾಷಾ ಸೂತ್ರ ನೆರೆಯ ತಮಿಳ್ನಾಡಿಗೇಕಿಲ್ಲ?| ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ
ಚೆನ್ನೈ(ಫೆ.15): ತನ್ನದೇ ಆಡಳಿತವಿರುವ ಕರ್ನಾಟಕದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಕನ್ನಡಿಗರ ಆರೋಪಗಳಿಗೆ ಮತ್ತಷ್ಟುಪುಷ್ಟಿನೀಡುವ ಘಟನೆಗಳು ಭಾನುವಾರ ನಡೆದಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಈ ವೇಳೆ ವೇದಿಕೆ ಸೇರಿದಂತೆ ಎಲ್ಲೆಡೆ ತಮಿಳು ಭಾಷೆಯಲ್ಲೇ ಕಾರ್ಯಕ್ರಮದ ಫಲಕ ಇದ್ದಿದ್ದು ಸಾಕಷ್ಟುಗಮನ ಸೆಳೆದಿದೆ. ಈ ವಿಷಯ ಸಹಜವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಕೆಲ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕದ ಭದ್ರಾವತಿಯಲ್ಲಿ ಭಾಗಿಯಾಗಿದ್ದ ಕೇಂದ್ರ ಸರ್ಕಾರದ ಕಾರ್ಯಕ್ರಮದ ವೇದಿಕೆಯ ಹಿನ್ನೆಲೆಯಲ್ಲಿ ಹಾಕಿದ್ದ ಅಷ್ಟೂಮಾಹಿತಿಗಳು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲೇ ಇದ್ದವು. ಕನ್ನಡ ಇರಲೇ ಇಲ್ಲ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕನ್ನಡಿಗರೊಬ್ಬರು ಪ್ರಶ್ನಿಸಿದಾಗ, ‘ಕೇಂದ್ರ ಸರ್ಕಾರಕ್ಕೆ ಸೇರಿದ ಕಾರ್ಯಕ್ರಮಗಳ ವೇಳೆ ತ್ರಿಭಾಷಾ ಸೂತ್ರ ಪಾಲಿಸುವುದು ಕಡ್ಡಾಯವಲ್ಲ. ದ್ವಿಭಾಷಾ ಸೂತ್ರ ಪಾಲನೆ ಮಾಡಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತ್ತು.
ಆದರೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ ಮತ್ತು ಕೇಂದ್ರದ ಅನುದಾನಿತ ಯೋಜನೆ ಸಂಬಂಧ ಭಾಗಿಯಾಗಿದ್ದ ಕಾರ್ಯಕ್ರಮಗಳ ವೇದಿಕೆ ಸಂಪೂರ್ಣ ತಮಿಳುಮಯವಾಗಿತ್ತು. ನಾಮಫಲಕದಲ್ಲಿ ಕೇವಲ ತಮಿಳು ಇತ್ತು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಕೇಂದ್ರ ಸರ್ಕಾರ ಕರ್ನಾಟಕಕ್ಕೊಂದು ತಮಿಳುನಾಡಿಗೊಂದು ನೀತಿ ಪ್ರದರ್ಶಿಸುತ್ತಿದೆ. ಕರ್ನಾಟಕದ ಮೇಲೆ ಉದ್ದೇಶಪೂರ್ವಕವಾಗಿಯೇ ಹಿಂದಿ ಹೇರಿಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರು ಈ ಬಗ್ಗೆ ಧ್ವನಿ ಎತ್ತದ ಕಾರಣ ಕನ್ನಡಿಗರ ಮೇಲೆ ಇಂಥ ದೌರ್ಜನ್ಯ ಮುಂದುವರೆದಿದೆ’ ಎಂದು ಕಿಡಿಕಾರಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 15, 2021, 7:46 AM IST