Asianet Suvarna News Asianet Suvarna News

50,000 ಕೋವಿಡ್‌ ನೆರವು: ಬೇರಾವ ದೇಶ ಮಾಡಿಲ್ಲ, ಕೇಂದ್ರಕ್ಕೆ ಸುಪ್ರೀಂ ಶ್ಲಾಘನೆ!

* ಕೋವಿಡ್‌ನಿಂದ ಮೃತರಾದವರ ಕುಟುಂಬಕ್ಕೆ 50,000 ರು. ಪರಿಹಾರ

* ಕೋವಿಡ್‌ ನೆರವು: ಕೇಂದ್ರಕ್ಕೆ ಸುಪ್ರೀಂ ಶ್ಲಾಘನೆ

* ಭಾರತ ಮಾಡಿದ್ದನ್ನು ಬೇರಾವ ದೇಶವೂ ಮಾಡಿಲ್ಲ

* ಕಣ್ಣೀರು ಒರೆಸುವ ಪ್ರಯತ್ನದ ಬಗ್ಗೆ ಸಂತಸವಿದೆ

No Country Managed To Do What India Did Supreme Court On Covid Steps pod
Author
Bangalore, First Published Sep 24, 2021, 8:18 AM IST
  • Facebook
  • Twitter
  • Whatsapp

ನವದೆಹಲಿ(ಸೆ.24): ಕೋವಿಡ್‌ನಿಂದ(Covid 19) ಮೃತರಾದವರ ಕುಟುಂಬಕ್ಕೆ 50,000 ರು. ಪರಿಹಾರ ನೀಡುವ ಕೇಂದ್ರ ಸರ್ಕಾರದ ನಿಲುವಿಗೆ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌(Supreme Court), ಈ ವಿಷಯದಲ್ಲಿ ಭಾರತ ಏನು ಮಾಡಿದೆಯೋ ಅದನ್ನು ಬೇರಾವುದೇ ದೇಶಕ್ಕೂ ಮಾಡಲು ಸಾಧ್ಯವಾಗಿಲ್ಲ ಎಂಬುದನ್ನು ನ್ಯಾಯಾಂಗ ಗಮನಿಸಿದೆ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದೆ.

ಅನೇಕ ಕುಟುಂಬಗಳ ಕಣ್ಣೀರು ಒರೆಸಲು ಪ್ರಯತ್ನ ನಡೆದಿದೆ ಎಂಬ ಬಗ್ಗೆ ನಮಗೆ ಸಂತೋಷವಿದೆ. ಸಂತ್ರಸ್ತ ಕುಟುಂಬಕ್ಕೆ ಇದರಿಂದ ಕೊಂಚವಾದರೂ ನೆಮ್ಮದಿ ಸಿಗಬಹುದು. ಅಪಾರ ಜನಸಂಖ್ಯೆಯುಳ್ಳ ದೇಶವಾಗಿರುವುದರಿಂದ ಬಹಳ ಸಮಸ್ಯೆಗಳಿದ್ದರೂ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದನ್ನು ಬೇರಾವುದೇ ದೇಶಕ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಗುರುವಾರ ನ್ಯಾ.ಎಂ.ಆರ್‌.ಶಾ ಹಾಗೂ ನ್ಯಾ.ಎ.ಎಸ್‌.ಬೋಪಣ್ಣ ಅವರ ಪೀಠ ಶ್ಲಾಘಿಸಿತು.

ಕೋವಿಡ್‌ನಿಂದ(Covid 19) ಮೃತರಾದವರ ಕುಟುಂಬಕ್ಕೆ ಆರ್ಥಿಕ ಪರಿಹಾರ ನೀಡಬೇಕೆಂಬ ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿದೆ. ಬುಧವಾರವಷ್ಟೇ ಆ ಬಗ್ಗೆ ಅಫಿಡವಿಟ್‌ ಸಲ್ಲಿಸಿದ್ದ ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಮೃತರ ಕುಟುಂಬಕ್ಕೆ 50,000 ರು. ಪರಿಹಾರ ನೀಡಲು ಶಿಫಾರಸು ಮಾಡಿದೆ ಎಂದು ತಿಳಿಸಿತ್ತು.

ಕೇಂದ್ರ ಸಲ್ಲಿಸಿದ ಅಫಿಡವಿಟ್‌ನಲ್ಲಿ ಏನಿದೆ?

ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಸರ್ಕಾರ, ‘ಕೊರೋನಾಕ್ಕೆ ಬಲಿಯಾದವರ ಜೊತೆಗೆ, ಕೊರೋನಾ(Covid19) ಹೋರಾಟದಲ್ಲಿ ಸಕ್ರಿಯರಾಗಿ ಇದೇ ವೈರಸ್‌ಗೆ ಬಲಿಯಾದವರಿಗೂ ತಲಾ 50000 ರು. ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ. ಈ ಪರಿಹಾರ ಮೊದಲು ಮತ್ತು 2ನೇ ಅಲೆಯಲ್ಲಿ ಮಡಿದವರಿಗೆ ಮಾತ್ರವಲ್ಲ. ಮುಂದಿನ ದಿನಗಳಲ್ಲೂ ಕೋವಿಡ್‌ಗೆ ಬಲಿಯಾದವರಿಗೂ ಅನ್ವಯವಾಗಲಿದೆ’ ಎಂದು ತಿಳಿಸಿದೆ.

‘ಕೋವಿಡ್‌ಗೆ ಬಲಿಯಾಗಿದ್ದನ್ನು ಖಚಿತಪಡಿಸಲು ಇತ್ತೀಚೆಗೆ ಹೊರಡಿಸಲಾದ ಮಾರ್ಗಸೂಚಿಗಳ ಅನ್ವಯ ಈ ಪರಿಹಾರ ನೀಡಲಾಗುವುದು. ಸಂತ್ರಸ್ತರ ಕುಟುಂಬಗಳು ಅಗತ್ಯ ದಾಖಲೆ ಸಲ್ಲಿಸಿದ 30 ದಿನಗಳಲ್ಲಿ ಅವರ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಯೋಜನೆ ಮೂಲಕ ಹಣ ಜಮೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿಯೇ ಅರ್ಜಿ ಸ್ವೀಕೃತಿ ಮತ್ತು ಹಣ ಜಮೆ ನಡೆಯಲಿದೆ. ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ರಾಜ್ಯಗಳೇ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಬೇಕು’ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ತಿಳಿಸಿದೆ.

ಕೊರೋನಾಕ್ಕೆ ಬಲಿಯಾದವರಿಗೆ ತಲಾ 4 ಲಕ್ಷ ರು. ಪರಿಹಾರ ನೀಡಬೇಕು ಎಂದು ಕೋರಿ ಹಲವು ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ತಲಾ 4 ಲಕ್ಷ ರು. ಹಣ ನೀಡಲು ಸಾಧ್ಯವಾಗದು. ಅಷ್ಟುಪ್ರಮಾಣದಲ್ಲಿ ಹಣ ನೀಡಿದರೆ ರಾಜ್ಯ ವಿಪತ್ತು ಪ್ರಾಧಿಕಾರಗಳಲ್ಲಿ ಕೋವಿಡ್‌ ನಿರ್ವಹಣೆಗೆ ಹಣವೇ ಉಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿತ್ತು. ಈ ಹಿನ್ನೆಲೆಯಲ್ಲಿ, ವೈರಸ್‌ಗೆ ಬಲಿಯಾದವರ ಕುಟುಬಗಳಿಗೆ ಪರಿಹಾರ ನೀಡುವ ಸಂಬಂಧ 6 ವಾರಗಳಲ್ಲಿ ಮಾರ್ಗಸೂಚಿಗಳನ್ನು ಶಿಫಾರಸು ಮಾಡುವಂತೆ ಜೂ.30ರಂದು ಎನ್‌ಡಿಎಂಎಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

Follow Us:
Download App:
  • android
  • ios