ಪುಣೆ(ಡಿ.28): ‘ಗೋ ಕೊರೋನಾ ಗೋ’ ಎನ್ನುವ ಮೂಲಕ ನಗೆಪಾಟಲಿಗೀಡಾಗಿದ್ದ ಕೇಂದ್ರ ಮಂತ್ರಿ ರಾಮದಾಸ್‌ ಅಠಾವಳೆ ಭಾನುವಾರ ಬ್ರಿಟನ್ನಿನ ರೂಪಾಂತರಿ ಕೊರೋನಾ ವೈರಸ್‌ ಬಗ್ಗೆ ಪ್ರತಿಕ್ರಿಯಿಸುತ್ತಾ ‘ನೋ ಕೊರೋನಾ’ ಎನ್ನುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅಠಾವಳೆ, ‘ಹಿಂದೆ ನಾನು ಗೋ ಕೊರೋನಾ ಗೋ ಎಂದು ಹೇಳಿದಂತೆಯೇ ಕೊರೋನಾ ವೈರಸ್‌ ಇದೀಗ ತೊಲಗುತ್ತಿದೆ. ಆದರೆ ಅದು ನನ್ನ ಸಮೀಪವೂ ಬಂದಿತ್ತು. ನನಗೂ ಸೋಂಕು ದೃಢಪಟ್ಟಿತ್ತು. ಸದ್ಯ ರೂಪಾಂತರಿ ಕೊರೋನಾ ವೈರಸ್‌ ಭೀತಿ ಉಂಟಾಗಿದೆ. ಹಾಗಾಗಿ ನಾನು, ‘ನೋ ಕೊರೋನಾ, ನೋ ಕೊರೋನಾ’ ಎಂದು ಹೇಳುತ್ತೇನೆ. ನಮಗೆ ಹಳೆಯ ವೈರಸ್ಸೂ ಬೇಡ, ಹೊಸತೂ ಬೇಡ’ ಎಂದು ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಅಠಾವಳೆ ಅವರು ‘ಗೋ ಕೊರೋನಾ ಗೋ’ ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.