ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ: ಕಾಂಗ್ರೆಸ್‌ನಿಂದ ಗಂಭೀರ ಆರೋಪ
ರಾಜ್ಯಸಭೆಯ ಸ್ಪೀಕರ್ ಧನಕರ್ ಬಿಜೆಪಿ ಸರ್ಕಾರದ ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಧನಕರ್ ಅವರ ವರ್ತನೆಯಿಂದ ಬೇಸತ್ತು ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತಿದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ‘ರಾಜ್ಯಸಭೆಯ ಸ್ಪೀಕರ್ ಆಗಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಬಿಜೆಪಿ ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿದ್ದು, ಸದಾ ವಿಪಕ್ಷಗಳಿಗೆ ಉಪದೇಶ ಮಾಡುತ್ತಾ ಶಾಲೆಯ ಮುಖ್ಯೋಪಾಧ್ಯಾಯರಂತೆ ವರ್ತಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಪ್ರತಿಪಕ್ಷಗಳು ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿರುವ ಬಗ್ಗೆ ದಿಲ್ಲಿಯ ಸಂವಿಧಾನ ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧನಕರ್ ವರ್ತನೆ ಅವರ ಹುದ್ದೆಗಿರುವ ಘನತೆಗೆ ವ್ಯತಿರಿಕ್ತವಾಗಿದೆ. ಪಕ್ಷಪಾತಿಯಂತೆ ವರ್ತಿಸುತ್ತಿರುವ ಅವರು ವಿಪಕ್ಷಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಯನ್ನು ಹೊಗಳುತ್ತಾರೆ’ ಎಂದು ಆರೋಪಿಸಿದರು.
ಅವಿಶ್ವಾಸ ನಿರ್ಣಯದ ಬಗ್ಗೆ ಮಾತನಾಡಿದ ಖರ್ಗೆ, ‘1952ರಿಂದ ಈವರೆಗೆ ಯಾವುದೇ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಗಿರಲಿಲ್ಲ. ಆದರೆ ಇಂದು ಆಗುದೆ. ಇದು ವೈಯಕ್ತಿಕ ಅಥವಾ ರಾಜಕೀಯ ದ್ವೇಷದಿಂದ ತೆಗೆದುಕೊಂಡ ನಿರ್ಧಾರವಲ್ಲ. ಬದಲಿಗೆ ಅವರ ವರ್ತನೆಯಿಂದ ಬೇಸತ್ತು ಅವರನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬರ ಪರಿಹಾರ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ: ಸುಪ್ರೀಂ
ಜಾಟರಿಗೆ ಅಮಮಾನ- ಬಿಜೆಪಿ ತಿರುಗೇಟು
ಅವಿಶ್ವಾಸ ನಿರ್ಣಯ ಮಂಡನೆಗೆ ಟ್ವೀಟರ್‌ನಲ್ಲಿ ಬಿಜೆಪಿ ಕಿಡಿಕಾರಿದೆ. ‘ಜಾರ್ಜ್ ಸೊರೊಸ್ ಜೊತೆ ಗಾಂಧಿ ಕುಟುಂಬದ ನಂಟು ಇದೆ. ಹೀಗಾಗಿ ಸಾರ್ವಜನಿಕರ ಗಮನವನ್ನು ಈ ವಿಷಯದಿಂದ ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಗಿದೆ. ಈ ಮೂಲಕ ಧನಕರ್ ಅವರನ್ನು ಮಾನಹಾನಿ ಮಾಡಲು ಮತ್ತು ಜಾಟ್ ಸಮುದಾಯವನ್ನು ಅವಮಾನಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ’ ಎಂದು ಕಿಡಿಕಾರಿದೆ.
ಇದನ್ನೂ ಓದಿ: ಉಪರಾಷ್ಟ್ರಪತಿ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ;ದೇಶದ ಇತಿಹಾಸದಲ್ಲೇ ಮೊದಲು!