Parliament Monsoon Session Updates: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಐಎನ್‌ಡಿಐಎ ಒಕ್ಕೂಟ ಸಲ್ಲಿಸಿದ್ದ ಅವಿಶ್ವಾಸ ನಿರ್ಣಯವನ್ನು ಸಂಸತ್ತಿನಲ್ಲ ಮೂರು ದಿನಗಳ ಕಾಲ ಚರ್ಚೆ ಮಾಡಲು ಒಪ್ಪಿಗೆ ನೀಡಲಾಗಿದೆ.
ನವದೆಹಲಿ (ಆ.1): ಸಂಸತ್ ಕಲಾಪಕ್ಕೆ ಮಣಿಪುರ ಹಿಂಸಾಚಾರದ ವಿಚಾರವನ್ನು ಹಿಡಿದುಕೊಂಡು ವಿಪಕ್ಷಗಳು ಅಡ್ಡಿಪಡಿಸುತ್ತಿರುವ ನಡುವೆಯೇ, ಐಎನ್‌ಡಿಐಎ ಒಕ್ಕೂಟ ಮಂಡಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಚರ್ಚೆ ಮಾಡಲು ಲೋಕಸಭೆ ಸಮ್ಮತಿ ನೀಡಿದೆ. ಆಗಸ್ಟ್ 8, 9 ಹಾಗೂ 10 ರಂದು ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆಯಾಗಲಿದ್ದು, ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಉತ್ತರ ನೀಡಲಿದ್ದಾರೆ. ಕಳೆದ ವಾರ, ಐಎನ್‌ಡಿಐಎ ಮೈತ್ರಿಕೂಟದ ವಿರೋಧ ಪಕ್ಷಗಳ ಪರವಾಗಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅದು ಹೊಂದಿರುವ ಬೆಂಬಲವನ್ನು ನಿರ್ಣಯಿಸಿದ ನಂತರ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಈ ಪ್ರಸ್ತಾಪವನ್ನು ಅಂಗೀಕರಿಸಿದರು ಮತ್ತು ಅದನ್ನು ಚರ್ಚೆಗೆ ನಿಗದಿಪಡಿಸುವುದಾಗಿ ತಿಳಿಸಿದ್ದರು.
ಎಲ್ಲ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ಈ ಕುರಿತು ಚರ್ಚೆ ನಡೆಸಲು ಸೂಕ್ತ ಸಮಯವನ್ನು ತಿಳಿಸುತ್ತೇನೆ ಎಂದು ಸ್ಪೀಕರ್ ತಿಳಿಸಿದ್ದರು. ಲೋಕಸಭೆಯಲ್ಲಿ 332 ಸಂಸದರ ದೊಡ್ಡ ಬೆಂಬಲವನ್ನು ಹೊಂದಿರುವ ನರೇಂದ್ರ ಮೋದಿ ಸರ್ಕಾರವು ಈ ಅವಿಶ್ವಾಸ ನಿರ್ಣಯದಿಂದ ಯಾವುದೇ ಹಿನ್ನಡೆಯನ್ನು ಎದುರಿಸುವುದಿಲ್ಲ.
