* ಅನೇಕ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯೇ ಇಲ್ಲ* ಮಹಿಳಾ ಆಯೋಗದ ಸಮೀಕ್ಷೆಯಲ್ಲಿ ಪತ್ತೆ* ಮಹಿಳಾ ನೌಕರರ ಲೈಂಗಿಕ ಕಿರುಕುಳ ತಡೆಗೆ ಸಮಿತಿ ರಚನೆ ಕಡ್ಡಾಯ* ಆದರೆ ಖಾಸಗಿ ಕಂಪನಿಗಳಲ್ಲಿ ಈ ಸಮಿತಿ ರಚನೆಗೆ ದಿವ್ಯ ನಿರ್ಲಕ್ಷ್ಯ* ಇಂಥ ಕಂಪನಿಗಳ ಪವಾನಗಿ ರದ್ದು ಮಾಡಲು ಕಾನೂನಲ್ಲಿ ಅವಕಾಶ

ಬೆಂಗಳೂರು(ಜೂ.13): ಮಹಿಳಾ ಉದ್ಯೋಗಿಗಳೊಂದಿಗೆ ಮೇಲಾಧಿಕಾರಿಗಳು ಮತ್ತು ಪುರುಷ ನೌಕರರಿಂದ ಆಗಬಹುದಾದ ಲೈಂಗಿಕ ಕಿರುಕುಳವನ್ನು ತಡೆಗಟ್ಟುವುದಕ್ಕಾಗಿ ಆಂತರಿಕ ದೂರು ಸಮಿತಿ(ಐಸಿಸಿ) ರಚನೆ ಮಾಡಬೇಕೆಂಬ ಸ್ಪಷ್ಟನಿರ್ದೇಶನವಿದ್ದರೂ, ಅನೇಕ ಖಾಸಗಿ ಸಂಸ್ಥೆಗಳಲ್ಲಿ ಈವರೆಗೂ ಸಮಿತಿ ರಚನೆ ಮಾಡಿಲ್ಲ ಎಂಬುದನ್ನು ಮಹಿಳಾ ಆಯೋಗ ಪತ್ತೆ ಮಾಡಿದೆ.

ರಾಜ್ಯದ ಎಲ್ಲ ಖಾಸಗಿ ಸಂಸ್ಥೆಗಳಿಂದ ವರದಿ ಸಂಗ್ರಹಿಸಿರುವ ರಾಜ್ಯ ಮಹಿಳಾ ಆಯೋಗ ಪರಿಶೀಲನೆ ನಡೆಸಿ 5,550 ಸಂಸ್ಥೆಗಳಲ್ಲಿ ಐಸಿಸಿ ಸಮಿತಿ ರಚನೆ ಮಾಡದಿರುವ ಅಂಶ ಪತ್ತೆ ಹಚ್ಚಿದೆ. ತಕ್ಷಣ ಸಮಿತಿ ರಚನೆ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪ್ರಕಾರ ಹತ್ತು ಜನರಿಗಿಂತ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಡ್ಡಾಯವಾಗಿ ಐಸಿಸಿ ರಚನೆ ಮಾಡಬೇಕು. ಸಮಿತಿ ರಚನೆ ಮಾಡದಿದ್ದಲ್ಲಿ ಅಂತಹ ಸಂಸ್ಥೆಗೆ ದಂಡ ವಿಧಿಸುವುದು ಮತ್ತು ಸಂಸ್ಥೆಯ ಪರವಾನಿಗೆ ರದ್ದು ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಈ ಸಂಬಂಧ ಎಲ್ಲ ಸಂಸ್ಥೆಗಳಿಗೆ ಜ್ಞಾಪನಾ ಪತ್ರ ರವಾನೆ ಮಾಡಿ ಎಚ್ಚರಿಕೆ ನೀಡಲಾಗಿದೆ ಎಂದು ಮಹಿಳಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

1700 ಸಂಸ್ಥೆಗಳಲ್ಲಿ ಸಮಿತಿ ಜಾರಿ:

ಮಹಿಳಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯದ ಎಲ್ಲ ಭಾಗಗಳಲ್ಲಿ ಐಸಿಸಿ ರಚನೆ ಮಾಡುವುದಕ್ಕೆ ಸಹಮತ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ, ಈವರೆಗೂ ಸುಮಾರು 400 ಸರ್ಕಾರಿ ಸೇರಿದಂತೆ 1300ಹೆಚ್ಚು ಖಾಸಗಿ ಸಂಸ್ಥೆಗಳಲ್ಲಿ ಐಸಿಸಿ ರಚನೆ ಮಾಡಲಾಗಿದೆ. ಇನ್ನುಳಿದ 3 ಸಾವಿರಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಸಮಿತಿ ರಚನೆ ಮಾಡುವುದಕ್ಕೆ ಸಿದ್ಧತೆ ನಡೆಸುತ್ತಿವೆ. ಆದರೆ, ಈವರೆಗೂ 5550 ಖಾಸಗಿ ಸಂಸ್ಥೆಗಳಲ್ಲಿ ಸಮಿತಿ ರಚನೆ ಮಾಡಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚಿಸದ ಎಲ್ಲ ಸಂಸ್ಥೆಗಳಿಗೂ ಜ್ಞಾಪನಾ ಪತ್ರ ರವಾನಿಸಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷ ಪ್ರಮೀಳಾ ನಾಯ್ಡು ವಿವರಿಸಿದರು.

210 ಲೈಂಗಿಕ ಕಿರುಕುಳ ಪ್ರಕರಣ ದಾಖಲು:

ಕಳೆದ ಒಂದು ವರ್ಷದಲ್ಲಿ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ 210 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲದೆ, ಗ್ರಾಮೀಣ ಭಾಗದಲ್ಲಿಯೂ ದೂರುಗಳು ದಾಖಲಾಗುತ್ತಿರುವುದು ಒಂದು ರೀತಿಯಲ್ಲಿ ಆತಂಕ ಹಾಗೂ ಇನ್ನೊಂದು ರೀತಿಯಲ್ಲಿ ಜಾಗೃತಿ ಮೂಡಿರುವುದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಈ ರೀತಿಯ ಪ್ರಕರಣಗಳು ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಕೇಳಿ ಬರುತ್ತಿವೆ. ಈ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ರಾಜ್ಯ ಮಹಿಳಾ ಆಯೋಗದಿಮದ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಪರಿಶೀಲನೆಗೊಳಪಡಿಸಲಾಗಿದೆ. ಬಹುತೇಕ ಸಂಸ್ಥೆಗಳಲ್ಲಿ ಸಮಿತಿ ರಚನೆ ಮಾಡಿದ್ದು, ಹಲವು ಸಂಸ್ಥೆಗಳಲ್ಲಿ ಈವರೆಗೂ ಸಮಿತಿ ರಚನೆ ಮಾಡುವುದಕ್ಕೆ ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಸಮಿತಿ ರಚನೆ ಮಾಡದ ಸಂಸ್ಥೆಗಳಿಗೆ ಜ್ಞಾಪನಾ ಪತ್ರ ನೀಡಿದ್ದು, ಎಚ್ಚರಿಕೆ ನೀಡಲಾಗಿದೆ.

- ಪ್ರಮೀಳಾ ನಾಯ್ಡು, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ