* ವೈದ್ಯರಿಗೆ ಚಿಕಿತ್ಸೆ ನಿರಾಕರಣೆ ಹಕ್ಕು ನೀಡಲು ಎನ್‌ಎಂಸಿ ಪ್ರಸ್ತಾಪ* ವೈದ್ಯರ ಮೇಲಿನ ಹಲ್ಲೆ ತಡೆಯಲು ಮಹತ್ವದ ಕ್ರಮ* ವೈದ್ಯರ ಮೇಲೆ ಹಲ್ಲೆ ನಡೆಸಿದ್ರೆ ಚಿಕಿತ್ಸೆ ಸಿಗಲ್ಲ!
ನವದೆಹಲಿ(ಜೂ.09): ವೈದ್ಯರ ಮೇಲೆ ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಹತ್ವದ ಕರಡು ವರದಿಯೊಂದನ್ನು ಸಿದ್ಧಪಡಿಸಿದೆ. ಇದರ ಪ್ರಕಾರ ರೋಗಿಗಳು ಅಥವಾ ಅವರ ಸಂಬಂಧಿಗಳು ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ನಿಂದಿಸಿದರೆ ಅಥವಾ ಅವರ ವಿರುದ್ಧ ಹಿಂಸಾತ್ಮಕ ಕೃತ್ಯ ಎಸಗಿದರೆ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಬಹುದಾಗಿದೆ.
ನೋಂದಾಯಿತ ವೈದ್ಯರ ವೃತ್ತಿಪರ ನಡವಳಿಕೆ ನಿಯಮಾವಳಿ 2022ರ ಕರಡಿನಂತೆ ‘ರೋಗಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿರುದ್ಧ ರೋಗಿ ಅಥವಾ ಆತನ ಸಂಬಂಧಿಕರು ಕೆಟ್ಟದಾಗಿ ವರ್ತಿಸಿದರೆ, ಹಲ್ಲೆ ಎಸಗಿದರೆ ಅಥವಾ ನಿಂದಿಸಿದರೆ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಬಹುದು. ಅಲ್ಲದೇ ರೋಗಿಯು ನಿಗದಿತ ಶುಲ್ಕವನ್ನು ಪಾವತಿಸದೇ ಇದ್ದಲ್ಲಿ ಅವರಿಗೆ ನೀಡುತ್ತಿರುವ ಚಿಕಿತ್ಸೆಯನ್ನು ಸ್ಥಗಿತಗೊಳಿಸುವ ಅಧಿಕಾರ ವೈದ್ಯರಿಗಿದೆ. ಆದರೆ ಸರ್ಕಾರಿ ವೈದ್ಯರಿಗೆ ಹಾಗೂ ತುರ್ತು ಚಿಕಿತ್ಸೆ ರೋಗಿಗಳ ವಿಚಾರದಲ್ಲಿ ಈ ನಿಯಮ ಅನ್ವಯಿಸುವುದಿಲ್ಲ’ ಎಂದು ತಿಳಿಸಿದೆ.
‘ವೈದ್ಯರು ವೃತ್ತಿಪರ ನಡವಳಿಕೆಗೆ ಚ್ಯುತಿ ಬರುವಂತೇ ತಮ್ಮ ಕರ್ತವ್ಯದ ಅವಧಿಯಲ್ಲಿ ಅಥವಾ ಅದರ ನಂತರ ಮದ್ಯ ಸೇರಿದಂತೆ ಯಾವುದೇ ಮಾದಕ ದ್ರವ್ಯ ಸೇವನೆ ಮಾಡಿದರೆ ಅದನ್ನು ದುರ್ನಡತೆ ಎಂದು ಪರಿಗಣಿಸಲಾಗುವುದು’ ಎಂದು ಕರಡು ಸ್ಪಷ್ಟಪಡಿಸಿದೆ.
